ADVERTISEMENT

ಸೋಲಿನ ಭೀತಿಯಲ್ಲಿರುವ ಮಮತಾ ಇವಿಎಂಗಳನ್ನು ಪ್ರಶ್ನಿಸುತ್ತಿದ್ದಾರೆ: ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 14:29 IST
Last Updated 21 ಮಾರ್ಚ್ 2021, 14:29 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಬಂಕುರಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು 10 ವರ್ಷಗಳ ಹಿಂದೆ ಚಾಲನೆಗೆ ತಂದ ಇವಿಎಂಗಳ ಕಾರ್ಯವೈಖರಿಯನ್ನು ಈಗಾಗಲೇ ಪ್ರಶ್ನಿಸಲು ಪ್ರಾರಂಭಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ರಾಜ್ಯದ ಅಭಿವೃದ್ಧಿ ಮತ್ತು ಯುವಕರ ಕನಸುಗಳನ್ನು ಈಡೇರಿಸಲು "ಅಸೋಲ್ ಪರಿವರ್ತನ್"ವನ್ನು (ನಿಜವಾದ ಬದಲಾವಣೆ) ಬಂಗಾಳಕ್ಕೆ ಬರುತ್ತಿದೆ ಎಂದು ಪ್ರತಿಪಾದಿಸಿದ ಮೋದಿ, "ಭ್ರಷ್ಟಾಚಾರ್‌-ಎರ್ ಖೇಲಾ ಚೋಲ್ಬೆ ನಾ" (ಭ್ರಷ್ಟಾಚಾರದ ಆಟ ಮುಂದುವರಿಯುವುದಿಲ್ಲ) ಎಂದು ಹೇಳಿದರು.

'ಇಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಸೋಲಿನ ನಿರೀಕ್ಷೆಯಲ್ಲಿರುವ ದೀದಿ ಈಗಾಗಲೇ 10 ವರ್ಷಗಳ ಹಿಂದೆ ಜಾರಿಗೆ ತಂದ ಇವಿಎಂಗಳನ್ನು (ವಿದ್ಯುನ್ಮಾನ ಮತಯಂತ್ರ) ಪ್ರಶ್ನಿಸಲು ಪ್ರಾರಂಭಿಸಿದ್ದಾರೆ' ಎಂದು ಹೇಳಿದರು.

ADVERTISEMENT

ಮತ ಯಂತ್ರಗಳನ್ನು ಟ್ಯಾಂಪರಿಂಗ್ ಮಾಡುವ ಭಯದಿಂದ ಇವಿಎಂ ಯಂತ್ರಗಳ ಮೇಲೆ ಕಣ್ಣಿಡಲು ಮಮತಾ ಬ್ಯಾನರ್ಜಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡುತ್ತಿದ್ದಾರೆ. ಟಿಎಂಸಿ ಹಾಕಿದ ವಾಲ್ ಪೋಸ್ಟರ್‌ಗಳಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನನ್ನ ತಲೆಗೆ ಒದೆಯುತ್ತಿರುವಂತೆ ಪ್ರದರ್ಶಿಸಿವೆ ಎಂದು ಅವರು ಹೇಳಿದ್ದಾರೆ.

ರಾಜಕೀಯ ಸಂದೇಶಗಳನ್ನು ನೀಡಲು ವ್ಯಂಗ್ಯಚಿತ್ರಗಳು ಮತ್ತು ಗೋಡೆಯ ಮೇಲಿನ ಬರಹಗಳನ್ನು ಹಾಕುವ ಸುದೀರ್ಘ ಸಂಪ್ರದಾಯವನ್ನು ಪಶ್ಚಿಮ ಬಂಗಾಳ ಹೊಂದಿದೆ.

ದೇಶದ 130 ಕೋಟಿ ಜನರ ಸೇವೆಯಲ್ಲಿ ನಾನು ಯಾವಾಗಲೂ ತಲೆ ಬಾಗುತ್ತೇನೆ, ದೀದಿ ನನ್ನ ತಲೆಯ ಮೇಲೆ ಕಾಲಿಟ್ಟು ಒದೆಯಬಹುದು ಆದರೆ, ಬಂಗಾಳದ ಜನರ ಕನಸುಗಳನ್ನು ಒದೆಯಲು ನಾನು ಆಕೆಗೆ ಅವಕಾಶ ನೀಡುವುದಿಲ್ಲ. ಆಯುಷ್ಮಾನ್ ಭಾರತ್, ಪಿಎಂ-ಕಿಸಾನ್ ಮತ್ತು ಕೇಂದ್ರದ ನೇರ ಲಾಭ ವರ್ಗಾವಣೆ ಯೋಜನೆಗಳಲ್ಲಿ ಹಗರಣಗಳನ್ನು ಮಾಡಲು ಸಾಧ್ಯವಿಲ್ಲವಾದ್ದರಿಂದ, ಇಲ್ಲಿನ ಟಿಎಂಸಿ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಈ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದು ಮೋದಿ ಹೇಳಿದ್ದಾರೆ.

'ಬಿಜೆಪಿ ಯೋಜನೆಗಳ ಮೇಲೆ ನಡೆಯುತ್ತದೆ, ಟಿಎಂಸಿ ಹಗರಣಗಳ ಮೇಲೆ ನಡೆಯುತ್ತದೆ. ಮಮತಾ ಬ್ಯಾನರ್ಜಿ ಬಂಗಾಳದ ಜನರ ಜೀವನದೊಂದಿಗೆ 10 ವರ್ಷಗಳಿಂದ ಆಟವಾಡಿದ್ದಾರೆ, ಆದರೆ ಈಗ ಅವರ `ಖೇಲಾ' (ಆಟ) ಮುಗಿದು `ವಿಕಾಸ್' (ಅಭಿವೃದ್ಧಿ) ಶುರುವಾಗಲಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.