ನರೇಂದ್ರ ಮೋದಿ
–ಪಿಟಿಐ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಡೆಯಲಿರುವ ‘ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್’ ಕಾರ್ಯಕ್ರಮದಲ್ಲಿ ಇಡೀ ದಿನ ಭಾಗವಹಿಸಲಿದ್ದಾರೆ.
ರಾಜಕೀಯ ನಂಟು ಇಲ್ಲದ ಒಂದು ಲಕ್ಷ ಯುವ ಜನತೆಯನ್ನು ರಾಜಕೀಯಕ್ಕೆ ಕರೆತರುವ ಅವರ ಪ್ರಯತ್ನದ ಭಾಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸ್ವಾಮಿ ವಿವೇಕಾನಂದ ಅವರ ಜನ್ಮ ದಿನೋತ್ಸವವನ್ನು ‘ರಾಷ್ಟ್ರೀಯ ಯುವ ದಿನ’ ಎಂದು ಆಚರಿಸಲಾಗುತ್ತಿದ್ದು, ಅಂದೇ ಈ ಕಾರ್ಯಕ್ರಮ ನಡೆಯಲಿದೆ. ದೇಶದ ವಿವಿಧ ಭಾಗಗಳಿಂದ ಬರಲಿರುವ 3 ಸಾವಿರ ‘ಉತ್ಸಾಹಿ ಯುವ ಜನತೆ’ಯೊಂದಿಗೆ ಪ್ರಧಾನಿ ಸಂವಾದ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.
‘ನನ್ನ ಯುವ ಸ್ನೇಹಿತರೊಂದಿಗೆ ಇಡೀ ದಿನ ಕಳೆಯಲಿದ್ದೇನೆ. ಭೋಜನದ ಜೊತೆಗೆ, ‘ವಿಕಸಿತ ಭಾರತ’ ನಿರ್ಮಾಣ ಉದ್ದೇಶದ ಹಲವು ವಿಷಯಗಳ ಕುರಿತು ಅವರೊಂದಿಗೆ ಚರ್ಚೆ, ಸಂವಾದ ನಡೆಸಲಿದ್ದೇನೆ’ ಎಂದು ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹೊಸ ಸಂಪ್ರದಾಯ: ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದ ಅಂಗವಾಗಿ ಪ್ರತಿ ವರ್ಷ ರಾಷ್ಟ್ರೀಯ ಯುವ ಜನೋತ್ಸವ ಹಮ್ಮಿಕೊಳ್ಳಲಾಗುತ್ತಿತ್ತು. 25 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಈ ಸಂಪ್ರದಾಯಕ್ಕೆ ಕೊನೆ ಹಾಡಿ, ‘ಯುವ ನಾಯಕ’ರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದ ವಿಶೇಷತೆಗಳು
* ದೇಶದ ಭವಿಷ್ಯದ ನಾಯಕರಿಗೆ ಪ್ರೇರೇಪಿಸಲು ಉತ್ತೇಜನ ನೀಡುವುದಕ್ಕಾಗಿ ರೂಪಿಸಿದ ವಿವಿಧ ಚಟುವಟಿಕೆಗಳಲ್ಲಿ ಮೋದಿ ಭಾಗಿ
* ‘ಯುವ ನಾಯಕ’ರಿಂದ 10 ವಿಷಯಗಳ ಕುರಿತು 10 ಪವರ್ ಪಾಯಿಂಟ್ ಪ್ರಸ್ತುತಿ
* 10 ವಿಷಯಗಳ ಕುರಿತು ಸ್ಪರ್ಧಿಗಳು ರಚಿಸಿರುವ ಅತ್ಯುತ್ತಮ ಪ್ರಬಂಧಗಳ ಸಂಕಲನವನ್ನು ಮೋದಿ ಬಿಡುಗಡೆ ಮಾಡುವರು
* ವಿವಿಧ ಸ್ಪರ್ಧೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ದೇಶದ ಕಲಾ ಪರಂಪರೆ ಬಿಂಬಿಸುವ ಪ್ರದರ್ಶನಗಳು ನಡೆಯಲಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.