ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿ 12ರಿಂದ ಎರಡು ದಿನ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರು, ಮೋದಿ ಅವರ ಭೇಟಿಯು ಭಾರತ ಮತ್ತು ಅಮೆರಿಕ ನಡುವಣ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಆಶಿಸಿದರು.
ಅಮೆರಿಕ ಭೇಟಿಗೂ ಮುನ್ನ ಪ್ರಧಾನಿ ಅವರು ಫೆಬ್ರುವರಿ 10ರಿಂದ ಫ್ರಾನ್ಸ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ನಡೆಯುವ ‘ಎ.ಐ ಆ್ಯಕ್ಷನ್’ ಶೃಂಗದಲ್ಲಿ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಜೊತೆಗೂಡಿ ಭಾಗವಹಿಸುವರು ಎಂದು ತಿಳಿಸಿದರು.
‘ಡೊನಾಲ್ಡ್ ಟ್ರಂಪ್ ಅವರು ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾದ ಬಳಿಕ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ನೀಡುತ್ತಿರುವ ಮೊದಲ ಭೇಟಿ ಇದು’ ಎಂದು ಹೇಳಿದರು.
‘ಹೊಸ ಆಡಳಿತ ಅಧಿಕಾರಕ್ಕೆ ಬಂದ ಕೇವಲ ಮೂರು ವಾರಗಳಲ್ಲಿ ಪ್ರಧಾನಿ ಅವರನ್ನು ಅಮೆರಿಕಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿರುವುದು, ಉಭಯ ದೇಶಗಳ ನಡುವಣ ಪಾಲುದಾರಿಕೆಯ ಮಹತ್ವವನ್ನು ಮತ್ತು ಈ ಪಾಲುದಾರಿಕೆಗೆ ಅಮೆರಿಕದಲ್ಲಿ ಇರುವ ಬೆಂಬಲವನ್ನು ತೋರಿಸುತ್ತದೆ’ ಎಂದು ತಿಳಿಸಿದರು.
‘ಟ್ರಂಪ್ ಅವರು ಮೊದಲ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವಧಿಯಿಂದಲೂ ಇಬ್ಬರು ನಾಯಕರ ನಡುವೆ ಸೌಹಾರ್ದ ಸಂಬಂಧ ಇದೆ. ಉಭಯ ದೇಶಗಳ ನಡುವೆ ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ರಕ್ಷಣೆ ಮತ್ತು ಭಯೋತ್ಪಾದನೆ ನಿಗ್ರಹ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಇದೆ’ ಎಂದು ಹೇಳಿದರು.
ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ ಭಾರತೀಯರನ್ನು ಅಮೆರಿಕ ವಾಪಸ್ ಕಳುಹಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಈ ಪ್ರವಾಸವು ಅತ್ಯಂತ ಮಹತ್ವವನ್ನು ಗಿಟ್ಟಿಸಿಕೊಂಡಿದೆ. ಭಾರತೀಯರ ವಲಸಿಗರ ಕೈ, ಕಾಲುಗಳಿಗೆ ಕೋಳ ತೊಡಿಸಿ ಅಮೆರಿಕ ಅಮಾನವೀಯ ರೀತಿಯಲ್ಲಿ ನಡೆಸಿಕೊಂಡಿರುವುದು ವಿಪಕ್ಷಗಳಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಪಟ್ಟಿಯಲ್ಲಿ 487 ಭಾರತೀಯರು
‘ಅಮೆರಿಕದ ಅಧಿಕಾರಿಗಳು ದೇಶವನ್ನು ತೊರೆಯುವಂತೆ ಸೂಚಿಸಿರುವ ವಲಸಿಗರಲ್ಲಿ ಭಾರತದ 487 ಪ್ರಜೆಗಳು ಇದ್ದಾರೆ ಎಂಬ ಮಾಹಿತಿ ಇದೆ. ಅದರಲ್ಲಿ 298 ಜನರ ವಿವರಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲಾಗಿದೆ. ಅಮೆರಿಕವು ಹಂಚಿಕೊಂಡಿರುವ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ’ ಎಂದು ವಿಕ್ರಂ ಮಿಸ್ರಿ ಹೇಳಿದರು.
‘ಮೊದಲ ಬ್ಯಾಚ್‌ನಲ್ಲಿ ಭಾರತಕ್ಕೆ ವಾಪಸ್ ಕಳುಹಿಸಿದ ವಲಸಿಗರನ್ನು ಅಮಾನವೀಯವಾಗಿ ನಡೆಸಿಕೊಂಡದ್ದರ ಬಗ್ಗೆ ಅಮೆರಿಕಕ್ಕೆ ನಮ್ಮ ಕಳವಳ ತಿಳಿಸಿದ್ದೇವೆ. ಕೈಕೋಳ ತೊಡಿಸುವುದನ್ನು ತಪ್ಪಿಸಬಹುದಿತ್ತು ಎಂದು ಹೇಳಿದ್ದೇವೆ’ ಎಂದರು. ‘ವಲಸಿಗರನ್ನು ವಾಪಸ್ ಕಳುಹಿಸುವಾಗ ಕೈಕೋಳ ತೊಡಿಸುವುದು ಸೇರಿದಂತೆ ಇತರ ನಿರ್ಬಂಧ ವಿಧಿಸುವ ನಿಯಮವನ್ನು ಅಮೆರಿಕವು 2012ರಿಂದಲೂ ಪಾಲಿಸಿಕೊಂಡು ಬರುತ್ತಿದೆ. ಈ ಹಿಂದೆ ಕೂಡಾ ವಲಸಿಗರನ್ನು ಇದೇ ರೀತಿ ವಾಪಸ್ ಕಳುಹಿಸಲಾಗಿತ್ತು. ಆದರೆ ಆ ಕುರಿತು ಪ್ರತಿಭಟನೆ ದಾಖಲಿಸಿದ್ದರ ಬಗ್ಗೆ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.