ADVERTISEMENT

ಸ್ವದೇಶಿ ವಸ್ತು ಬಳಕೆಯೇ ನೈಜ ದೇಶ ಸೇವೆ: ಪ್ರಧಾನಿ ಮೋದಿ

ಪಿಟಿಐ
Published 2 ಆಗಸ್ಟ್ 2025, 13:25 IST
Last Updated 2 ಆಗಸ್ಟ್ 2025, 13:25 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ವಾರಾಣಸಿ: ಜಾಗತಿಕ ಆರ್ಥಿಕತೆಯು ಅನಿಶ್ಚಿತತೆಯಲ್ಲಿರುವ ಈ ಸಂದರ್ಭದಲ್ಲಿ ದೇಶೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವುದೇ ನಿಜವಾದ ದೇಶ ಸೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದರು.

ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ಮೂಲಕ ‘ಸ್ವದೇಶಿ’ ತತ್ವವನ್ನು ಅಳವಡಿಸಿಕೊಳ್ಳುವಂತೆ ನಾಗರಿಕರಿಗೆ ಅವರು ಕರೆ ನೀಡಿದರು.

ವಾರಾಣಸಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಆರ್ಥಿಕ ಪ್ರಗತಿ ಬಗ್ಗೆ ಮಾತನಾಡುತ್ತಲೇ ಜಾಗತಿಕ ವಿದ್ಯಮಾನಗಳ ಬಗ್ಗೆ ಗಮನ ಸೆಳೆಯಲು ಇಚ್ಛಿಸುತ್ತೇನೆ. ಜಾಗತಿಕ ಆರ್ಥಿಕತೆಯು ಅಸ್ಥಿರತೆ ಮತ್ತು ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಎಲ್ಲ ದೇಶಗಳು ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡುತ್ತಿವೆ. ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯತ್ತ ದಾಪುಗಾಲಿಡುತ್ತಿರುವ ಭಾರತ ಸಹ ಇದೇ ಹಾದಿಯಲ್ಲಿದೆ’ ಎಂದು ಹೇಳಿದರು.

ADVERTISEMENT

ರೈತರು, ಸಣ್ಣ ಕೈಗಾರಿಕೆಗಳು ಮತ್ತು ಯುವಜನತೆಗೆ ಉದ್ಯೋಗ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆ. ಈ ನಿಟ್ಟಿನಲ್ಲಿ ಸರ್ಕಾರವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ನಾಗರಿಕರಾಗಿ ನಮಗೂ ಕೆಲ ಜವಾಬ್ದಾರಿಗಳಿವೆ ಎಂದರು.

ಭಾರತವು ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲು ಪ್ರತಿಯೊಂದು ರಾಜಕೀಯ ಪಕ್ಷ, ಪ್ರತಿಯೊಬ್ಬ ನಾಯಕ ಹಿಂಜರಿಕೆಯನ್ನು ಬದಿಗಿಟ್ಟು ರಾಷ್ಟ್ರೀಯ ಹಿತಾಸಕ್ತಿಗಾಗಿ ಕೆಲಸ ಮಾಡಬೇಕು. ಜನರಲ್ಲಿ ಸ್ವದೇಶಿ ಉತ್ಪನ್ನ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ಕೊಡುವ ದೃಷ್ಟಿಯಲ್ಲಿ ನಮ್ಮ ಕ್ರಮವು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಇದು ಮಹಾತ್ಮ ಗಾಂಧಿ ಅವರಿಗೆ ಸಲ್ಲಿಸುವ ನಿಜವಾದ ಗೌರವ. ಸಾಮೂಹಿಕ ಪ್ರಯತ್ನದಿಂದ ಮಾತ್ರ ‘ಅಭಿವೃದ್ಧಿ ಹೊಂದಿದ ಭಾರತ’ ಎಂಬ ಕನಸು ನನಸಾಗುತ್ತದೆ ಎಂದು ಪ್ರತಿಪಾದಿಸಿದರು.

‘ಉತ್ತರ ಪ್ರದೇಶದಲ್ಲಿ ತಯಾರಾದ  ಕ್ಷಿಪಣಿಗಳಿಂದ ಉಗ್ರರಿಗೆ ತಕ್ಕ ಶಾಸ್ತಿ’
ಪಾಕಿಸ್ತಾನವು ಭಾರತದ ವಿರುದ್ಧ ಮತ್ತೆ ಯಾವುದೇ ಪಾಪಕೃತ್ಯ ಎಸಗಿದಲ್ಲಿ ಉತ್ತರ ಪ್ರದೇಶದಲ್ಲಿ ತಯಾರಾದ ಕ್ಷಿಪಣಿಗಳು ಭಯೋತ್ಪಾದಕನ್ನು ನಿರ್ಮಾಮ ಮಾಡಲಿವೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು. ‘ಪಹಲ್ಗಾಮ್‌ ಉಗ್ರ ದಾಳಿ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದೆ. ಶಿವನ ಆಶೀರ್ವಾದದಿಂದಾಗಿ ‘ಆಪರೇಷನ್‌ ಸಿಂದೂರ’ದ ಮೂಲಕ ಅದು ಸಾಧ್ಯವಾಯಿತು. ಈ ಯಶಸ್ಸನ್ನು ಮಹದೇವನ ಪಾದಕ್ಕೆ ಅರ್ಪಿಸುತ್ತೇನೆ’ ಎಂದರು. ದೇಶದ 140 ಕೋಟಿ ಜನರ ಒಗ್ಗಟ್ಟೇ ಆಪರೇಷನ್‌ ಸಿಂಧೂರದ ಶಕ್ತಿ ಎಂದರು. ಆಪರೇಷನ್ ಸಿಂಧೂರವು ಜಗತ್ತಿನೆದುರು ಭಾರತದ ಶಕ್ತಿ–ಸಾಮರ್ಥ್ಯವನ್ನು ಅನಾವರಣ ಮಾಡಿದೆ. ಭಾರತದ ಮೇಲೆ ದಾಳಿ ಮಾಡಲು ಧೈರ್ಯ ತೋರುವವರು ಪಾತಾಳ ಲೋಕದಲ್ಲಿ ಅಡಗಿ ಕುಳಿತರೂ ದೇಶವು ಸಮ್ಮನೆ ಬಿಡುವುದಿಲ್ಲ ಎಂಬ ಸಂದೇಶ ರವಾನಿಸಿದೆ ಎಂದು ಹೇಳಿದರು.

ಮೋದಿ ಹೇಳಿದ್ದು...

  • ಪಾಕಿಸ್ತಾನದಲ್ಲಿನ ಉಗ್ರರ ಅಡಗುದಾಣಗಳನ್ನು ಭಾರತ ನಾಶ ಮಾಡಿದೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳಿಗೆ ಸಾಧ್ಯವಾಗಿಲ್ಲ .

  • ಸೇನಾ ಪಡೆಗಳ ಪರಾಕ್ರಮವನ್ನು ಕಾಂಗ್ರೆಸ್‌ ಪದೇ ಪದೇ ಅವಮಾನಿಸಿದೆ. ‘ಆಪರೇಷನ್‌ ಸಿಂಧೂರ’ವನ್ನು ‘ತಮಾಷೆ’ ಎಂದು ಕರೆದಿದೆ.

  • ನವ ಭಾರತವು ಶಿವನನ್ನು ಆರಾಧಿಸುತ್ತದೆ. ಆದರೆ ಅಗತ್ಯ ಬಿದ್ದಾಗ ಶತ್ರುಗಳ ವಿರುದ್ಧ ‘ಕಾಲ ಭೈರವ’ನಾಗಿ ಬದಲಾಗುತ್ತದೆ.

  • ‘ಆಪರೇಷನ್‌ ಸಿಂಧೂರ’ದಿಂದ ಭಾರತದಲ್ಲಿಯೇ ತಯಾರಾದ ರಕ್ಷಣಾ ಸಾಧನಗಳ ಸಾಮರ್ಥ್ಯದ ಅನಾವರಣವಾಗಿದೆ 

  • ಬ್ರಹ್ಮೋಸ್ ಕ್ಷಿಪಣಿಗಳು ಕನಸಿನಲ್ಲಿಯೂ ಶಾಂತವಾಗಿ ನಿದ್ದೆ ಮಾಡಲಾಗದಂತಹ ಭಯವನ್ನು ಭಯೋತ್ಪಾದಕರಲ್ಲಿ ಹುಟ್ಟುಹಾಕಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.