ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಪಿಟಿಐ ಚಿತ್ರಗಳು
ಪಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನು ಎಸೆಯಲು ಬಯಸಿದ್ದರು. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಜಯ ಸಿಗದಿದ್ದಕ್ಕೆ ಸಂವಿಧಾನಕ್ಕೆ ತಲೆಬಾಗಿದರು ಎಂದು ಸಂಸದ ರಾಹುಲ್ ಗಾಂಧಿ ತಿವಿದಿದ್ದಾರೆ.
ಬಿಹಾರದ ಪಟ್ನಾದಲ್ಲಿ ಇಂದು ನಡೆದ ‘ಸಂವಿಧಾನ ಸುರಕ್ಷಾ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ಎಸೆಯಲು ಬಯಸಿದ್ದ ಮೋದಿ ಅವರ ಉದ್ದೇಶ ನಮ್ಮ ಹೋರಾಟದಿಂದ ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಭಾಷಣದುದ್ದಕ್ಕೂ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದರು.
ದೇಶದ ಸಂವಿಧಾನ ಕೇವಲ ಪುಸ್ತಕವಲ್ಲ. ಅದು ದಲಿತರ ಮೇಲಿನ ದೌರ್ಜನ್ಯ ಹಾಗೂ ಅವರ ಕಷ್ಟಗಳ ಬಗ್ಗೆಯೂ ಮಾತನಾಡುತ್ತದೆ ಎಂದು ಅವರು ಹೇಳಿದ್ದಾರೆ.
ದಲಿತರು, ಅಲ್ಪಸಂಖ್ಯಾತರು ಹಾಗೂ ಒಬಿಸಿ ದೇಶದ ಜನಸಂಖ್ಯೆಯಲ್ಲಿ ಶೇ 90ರಷ್ಟಿದ್ದಾರೆ. ಆದರೆ ಅವರು ಇಂದಿಗೂ ವ್ಯವಸ್ಥೆಯ ಭಾಗವಾಗಿಲ್ಲ. ಇದಕ್ಕಾಗಿಯೇ ನಾವು ಜಾತಿಗಣತಿಗೆ ಆಗ್ರಹಿಸುತ್ತಿದ್ದೇವೆ. ‘ಅಧಿಕಾರಿ ವರ್ಗದಲ್ಲಿ ಹಾಗೂ ಇತರ ವಲಯಗಳಲ್ಲಿ ಒಬಿಸಿ, ದಲಿತರ ಪಾಲುದಾರಿಕೆ ಎಷ್ಟು ಎಂದು ತಿಳಿಯಲು ಜಾತಿಗಣತಿ ಅಗತ್ಯ’ ಎಂದು ಹೇಳಿದ್ದಾರೆ.
ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಸಂವಿಧಾನವನ್ನು ದುರ್ಬಲಗೊಳಿಸಿ, ಶೋಷಿತ ಸಮಾಜಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ದೇಶದ ಸ್ವಾತಂತ್ರ್ಯದ ಕುರಿತು ಮೋಹನ್ ಭಾಗವತ್ ಅವರ ಹೇಳಿಕೆಯು ಸಂವಿಧಾನ ವಿರೋಧಿ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.