ADVERTISEMENT

ರೈತರು ನನಗಾಗಿ ಸತ್ತರೇ ಎಂದು ಮೋದಿ ಕೇಳಿದರು: ಮೇಘಾಲಯ ರಾಜ್ಯಪಾಲರ ಗಂಭೀರ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2022, 7:52 IST
Last Updated 3 ಜನವರಿ 2022, 7:52 IST
ಪ್ರಧಾನಿ ಮೋದಿ ಮತ್ತು ಸತ್ಯಪಾಲ್‌ ಮಲಿಕ್‌ ಭೇಟಿ (ಟ್ವಿಟರ್‌ ಚಿತ್ರ: @PMOIndia)
ಪ್ರಧಾನಿ ಮೋದಿ ಮತ್ತು ಸತ್ಯಪಾಲ್‌ ಮಲಿಕ್‌ ಭೇಟಿ (ಟ್ವಿಟರ್‌ ಚಿತ್ರ: @PMOIndia)   

ನವದೆಹಲಿ: ಮೋದಿ ಬಹಳ ದುರಹಂಕಾರಿ. ರೈತರು ನನಗಾಗಿ ಸತ್ತರೇ ಎಂದು ನನ್ನನ್ನು ಪ್ರಶ್ನಿಸಿದ್ದರು ಎಂದು ಮೇಘಾಲಯದ ರಾಜ್ಯಪಾಲ ಸತ್ಯಪಾಲ್‌ ಮಲೀಕ್‌ಗಂಭೀರ ಆರೋಪ ಮಾಡಿದ್ದಾರೆ.

ಮಲೀಕ್‌ ಅವರು ಮಾತನಾಡಿರುವ ವಿಡಿಯೊವನ್ನು ಕಾಂಗ್ರೆಸ್‌ ತನ್ನ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದೆ.

'ರೈತರ ಪ್ರತಿಭಟನೆಗಳ ಬಗ್ಗೆ ಚರ್ಚಿಸಲು ಪ್ರಧಾನಿಯವರನ್ನು ಭೇಟಿಯಾಗಿದ್ದೆ. ಆಗ ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ದುರಹಂಕಾರದಲ್ಲಿ ಮಾತನಾಡಿದರು. ನಮ್ಮವರೇ (ರೈತರು) 500 ಮಂದಿ ಸತ್ತಿದ್ದಾರೆ ಎಂದು ನಾನು ಅವರಿಗೆ ಹೇಳಿದೆ. ಅದಕ್ಕವರು, ರೈತರು ನನಗಾಗಿ ಸತ್ತಿದ್ದಾರೆಯೇ? ಎಂದು ಪ್ರಶ್ನೆ ಮಾಡಿದರು. ನೀವುದೊರೆಯಾಗಿರುವುದರಿಂದನಿಮಗಾಗಿಯೇ ಸತ್ತಿದ್ದಾರೆ ಎಂದು ನಾನು ಹೇಳಿದೆ. ನಂತರ ಅವರೊಂದಿಗೆ ನಾನು ಹೆಚ್ಚು ಚರ್ಚೆ ಮಾಡಲು ಹೋಗಲಿಲ್ಲ,' ಎಂದು ಅವರು ಹೇಳಿರುವುದು ವಿಡಿಯೊದಲ್ಲಿದೆ.

ADVERTISEMENT

ಹರಿಯಾಣದ ದಾದ್ರಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಮಲಿಕ್‌ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದಿದ್ದಕ್ಕೆ ನೋವಾಗಿದೆ ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಈ ಹಿಂದೆ ಹೇಳಿದ್ದರು.

‘ಒಂದು ವೇಳೆ ನನ್ನ ಈ ಅಭಿಪ್ರಾಯದ ಬಗ್ಗೆ ಪಕ್ಷ ಆಕ್ಷೇಪ ಎತ್ತಿದರೆ, ರಾಜ್ಯಪಾಲ ಹುದ್ದೆಯನ್ನು ತೊರೆದು ಹೊರಗಿನಿಂದ ರೈತರ ಪರವಾಗಿ ದನಿ ಎತ್ತುತ್ತೇನೆ’ ಎಂದು ಮಲಿಕ್ ತಿಳಿಸಿದ್ದರು.

‘ನಾನು ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ಹೀಗಾಗಿಯೇ ರೈತರು ಅನುಭವಿಸುತ್ತಿರುವ ನೋವು ಅರ್ಥಮಾಡಿಕೊಂಡಿದ್ದೇನೆ. ನನ್ನ ಅಭಿಪ್ರಾಯದ ಬಗ್ಗೆ ಪಕ್ಷದ ಮುಖಂಡರು ಏನೇ ಅಂದುಕೊಂಡರೂ ನನಗೆ ಚಿಂತೆಯಿಲ್ಲ’ ಎಂದೂ ಮಲಿಕ್ ಹೇಳಿದ್ದಾರೆ.

ರೈತರ ಪ್ರತಿಭಟನೆಯಲ್ಲಿ ಸತ್ತವರ ಕುರಿತು ಯಾರೂ ಮಾತನಾಡದಿದ್ದುದಕ್ಕೆ ಮಲಿಕ್ ವಿಷಾದ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.