ADVERTISEMENT

 ವಿದೇಶ ಪ್ರವಾಸಕ್ಕೆ ₹2,021 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿದ್ದಾರೆ ಮೋದಿ!

ಪಿಟಿಐ
Published 29 ಡಿಸೆಂಬರ್ 2018, 4:25 IST
Last Updated 29 ಡಿಸೆಂಬರ್ 2018, 4:25 IST
   

ನವದೆಹಲಿ: 2014 -2018ರ ಅವಧಿಯಲ್ಲಿ ವಿದೇಶ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ₹2.021 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ಸರ್ಕಾರ ಹೇಳಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ವಿ.ಕೆ ಸಿಂಗ್, 2014 -2018ರ ಅವಧಿಯಲ್ಲಿ ಮೋದಿಯವರು ಭೇಟಿ ನೀಡಿದ ರಾಷ್ಟ್ರಗಳ ಬಗ್ಗೆ ಪಟ್ಟಿ ಮಾಡಿದ್ದಾರೆ.ಅಷ್ಟೇ ಅಲ್ಲದೆ ಯಾವ ರಾಷ್ಟ್ರಗಳಿಂದ ಹೆಚ್ಚಿನ ವಿದೇಶಿ ನೇರ ಬಂಡವಾಳ(ಎಫ್‍ಡಿಐ) ಹರಿದುಬಂದಿದೆ ಎಂದು ಟಾಪ್ 10 ರಾಷ್ಟ್ರಗಳ ಪಟ್ಟಿಯನ್ನೂ ಮಾಡಿದ್ದಾರೆ.

2014ರಲ್ಲಿ ₹30,930.5 ಮಿಲಿಯನ್ ಅಮೆರಿಕನ್ ಡಾಲರ್ ಇದ್ದ ವಿದೇಶಿ ನೇರ ಬಂಡವಾಳ 2017ರ ಹೊತ್ತಿಗೆ ₹43478.27 ಅಮೆರಿಕನ್ ಡಾಲರ್ ಆಗಿ ಏರಿಕೆ ಆಗಿದೆ ಎಂದಿದ್ದಾರೆ ಸಿಂಗ್.

ADVERTISEMENT

ಸಚಿವರುನೀಡಿದ ಮಾಹಿತಿ ಪ್ರಕಾರ 2009-10 ಮತ್ತು 2013-14 ಯುಪಿಎ-II ಅಧಿಕಾರವಧಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಚಾರ್ಟೆಡ್ ಫ್ಲೈಟ್ (ವೈಯಕ್ತಿಕವಾಗಿ ಜೆಟ್) , ವಿಮಾನಗಳ ದುರಸ್ಥಿ ಮತ್ತು ಹಾಟ್ ಲೈನ್ ಸೌಲಭ್ಯಕ್ಕಾಗಿ ₹1,346 ಕೋಟಿ ಖರ್ಚಾಗಿತ್ತು.

2019ರಿಂದ 2014ರ ವರೆಗೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ವಿದೇಶ ಪ್ರವಾಸ ಮತ್ತು 2014ರ ನಂತರ ಮೋದಿ ವಿದೇಶ ಪ್ರವಾಸದ ಖರ್ಚು ಎಷ್ಟು ಎಂದು ಕೇಳಿದಕ್ಕೆ ಸಿಂಗ್ ರಾಜ್ಯಸಭೆಯಲ್ಲಿ ಉತ್ತರಿಸಿದ್ದಾರೆ.

ಖರ್ಚು ವೆಚ್ಚದ ಮಾಹಿತಿ ಪ್ರಕಾರ ಪ್ರಧಾನಿಯವರ ವಿಮಾನದ ನಿರ್ವಹಣೆಗಾಗಿ ಒಟ್ಟು ₹1,583.18 ಕೋಟಿ ಖರ್ಚು ಮಾಡಲಾಗಿದೆ.ಜೂನ್ 15, 2014ರಿಂದ ಡಿಸೆಂಬರ್ 3, 2018ರ ವರೆಗೆ ಚಾರ್ಟೆಡ್ ಫ್ಲೈಟ್ ಗಳಿಗಾಗಿ ₹429.25 ಕೋಟಿ ಖರ್ಚಾಗಿದೆ.ಹಾಟ್ ಲೈನ್‍ಗಾಗಿ ಖರ್ಚು ಆಗಿದ್ದು ₹9.11 ಕೋಟಿ.

ಮೋದಿಯವರು ಮೇ 2014ರಲ್ಲಿ ಪ್ರಧಾನಿಯಾದ ನಂತರ 48 ವಿದೇಶ ಪ್ರಯಾಣಗಳನ್ನು ಕೈಗೊಂಡಿದ್ದು 55 ದೇಶಗಳಿಗೆ ಭೇಟಿ ನೀಡಿದ್ದಾರೆ. ಕೆಲವೊಂದು ದೇಶಗಳಿಗೆ ಅವರು ಒಂದಕ್ಕಿಂತ ಹೆಚ್ಚು ಬಾರಿ ಪ್ರಯಾಣ ಕೈಗೊಂಡಿದ್ದಾರೆ .

ವಿ.ಕೆ. ಸಿಂಗ್ ಅವರು ನೀಡಿದ ಮಾಹಿತಿಯಲ್ಲಿ ಮೋದಿಯವರು 2017-18 ಮತ್ತು 2018-19ರಲ್ಲಿ ವಿದೇಶ ಪ್ರಯಾಣ ಕೈಗೊಂಡಾಗ ಹಾಟ್ ಲೈನ್ ಸೌಲಭ್ಯಕ್ಕಾಗಿ ಖರ್ಚು ಮಾಡಿದ ಹಣ ಇದರಲ್ಲಿ ಲೆಕ್ಕ ಹಾಕಿಲ್ಲ ಎಂದಿದ್ದಾರೆ.

2014-2015ರಲ್ಲಿ ವಿದೇಶಕ್ಕೆ ಚಾರ್ಟೆಡ್ ಫ್ಲೈಟ್ ಪ್ರಯಾಣಕ್ಕಾಗಿ ಖರ್ಚಾದ ಹಣ ₹93.76 ಕೋಟಿ. ಏತನ್ಮಧ್ಯೆ 2015 -16ರಲ್ಲಿ ಖರ್ಚಾದ ಹಣ ₹117.89 ಕೋಟಿ, 2016 - 17ರ ಅವಧಿಯಲ್ಲಿ ಅದು ₹76.27 ಕೋಟಿ ಮತ್ತು 2017-18ರಲ್ಲಿ ₹99.32 ಕೋಟಿ ಆಗಿದೆ.

2018-19 ಡಿಸೆಂಬರ್ 3ರವರೆಗೆ ವಿದೇಶ ಪ್ರಯಾಣಕ್ಕಾಗಿ ಚಾರ್ಟೆಡ್ ಫ್ಲೈಟ್ ಖರ್ಚು ₹42.01 ಕೋಟಿಯಾಗಿದೆ.
ಮೋದಿ ಭೇಟಿ ನೀಡಿದ ವಿದೇಶ ರಾಷ್ಟ್ರಗಳಿಂದ ಎಷ್ಟು ಹೂಡಿಕೆ ಲಭಿಸಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಗ್, 2014- 2018 ಜೂನ್ ಅವಧಿಯಲ್ಲಿ ₹136,077.75 ಮಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಬಂಡವಾಳ ಹರಿದುಬಂದಿದೆ. 2011 - 2014ರ ಅವಧಿಯಲ್ಲಿ ವಿದೇಶಿ ನೇರ ಬಂಡವಾಳ ₹81,843.71 ಮಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.