ADVERTISEMENT

ಕ್ರಿಸ್‌ಮಸ್‌ಗೆ ಅಡ್ಡಿ; ಕಿಡಿಗೇಡಿಗಳನ್ನು ಬಂಧಿಸಲು ಪ್ರಧಾನಿ ಸೂಚಿಸಲಿ- ಚಿದಂಬರಂ

ಪಿಟಿಐ
Published 27 ಡಿಸೆಂಬರ್ 2021, 2:07 IST
Last Updated 27 ಡಿಸೆಂಬರ್ 2021, 2:07 IST
ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ
ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ   

ನವದೆಹಲಿ: ಹರಿಯಾಣ ಮತ್ತು ಅಸ್ಸಾಂನಲ್ಲಿ ಕ್ರಿಸ್‌ಮಸ್ ಸಂಬಂಧಿ ಕಾರ್ಯಕ್ರಮಗಳಿಗೆ ಕಿಡಿಗೇಡಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ವರದಿಯಾಗಿರುವ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿಯವರು ಪ್ರಚೋದನೆ ನೀಡುವ ಬದಲಿಗೆ, ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಗುರುತಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಬಿಜೆಪಿ ಸರ್ಕಾರಗಳಿಗೆ ಸೂಚಿಸಬೇಕು ಎಂದು ಹೇಳಿದ್ದಾರೆ.

'ಯೇಸು ಕ್ರಿಸ್ತನ ಬೋಧನೆಗಳನ್ನು ಸ್ಮರಿಸುವಂತೆ ಪ್ರಧಾನಿ ಜನರಿಗೆ ಹೇಳುತ್ತಿರುವ ದಿನವೇ ಹರಿಯಾಣದ ಖಾಸಗಿ ಶಾಲೆಯೊಂದರಲ್ಲಿ ಕ್ರಿಸ್‌ಮಸ್ ಕಾರ್ಯಕ್ರಮಕ್ಕೆ ಕಿಡಿಗೇಡಿಗಳು ಅಡ್ಡಿಪಡಿಸಿದ್ದಾರೆ' ಎಂದು ತಿಳಿಸಿದರು.

ADVERTISEMENT

'ಯಾರು ಈ ಕಿಡಿಗೇಡಿಗಳು? ಅವರು 'ಜೈ ಶ್ರೀ ರಾಮ್' ಮತ್ತು 'ಭಾರತ್ ಮಾತಾ ಕಿ ಜೈ' ಎಂದು ಕೂಗುತ್ತಿದ್ದುದಾಗಿ ವರದಿಯಾಗಿದೆ. ಅದಾದ ಮರುದಿನ ಅಸ್ಸಾಂನಲ್ಲಿ ಕೂಡ ಚರ್ಚ್‌ನ ಕಾರ್ಯಗಳಿಗೆ ಅಡ್ಡಿಪಡಿಸಲಾಗಿದೆ. ಹೀಗಾಗಿ ಪ್ರಚೋದನೆ ನೀಡುವ ಬದಲು, ಪ್ರಧಾನಿ ಮೋದಿಯವರು ಹರಿಯಾಣ ಮತ್ತು ಅಸ್ಸಾಂನ ಬಿಜೆಪಿ ಸರ್ಕಾರಗಳಿಗೆ ಈ ಕಿಡಿಗೇಡಿಗಳನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಬೇಕು' ಎಂದು ಒತ್ತಾಯಿಸಿದ್ದಾರೆ.

'ಯೇಸು ಕ್ರಿಸ್ತನ ಬೋಧನೆಗಳನ್ನು ಓದಲು ಹಿಂದೂ ಸಂಘಟನೆಗಳಿಗೆ ಪ್ರಧಾನಿ ಮೋದಿ ಸಲಹೆ ನೀಡಬೇಕು' ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.