ADVERTISEMENT

ಪ್ರಧಾನಿ ನರೇಂದ್ರ ಮೋದಿ 'ಮನ್ ಕಿ ಬಾತ್' ಮುಖ್ಯಾಂಶಗಳು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 7:15 IST
Last Updated 28 ಮಾರ್ಚ್ 2021, 7:15 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: 'ಮನ್ ಕಿ ಬಾತ್' ರೆಡಿಯೊ ಕಾರ್ಯಕ್ರಮದ 75ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದಪ್ರಧಾನಿ ನರೇಂದ್ರ ಮೋದಿ ಅನೇಕ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ಮುಖ್ಯಾಂಶಗಳು:

ಕೃಷಿಯಲ್ಲಿ ನಾವೀನ್ಯ ತಂತ್ರಗಾರಿಕೆ...

ಆದಾಯವನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ರೈತರು ಸಾಂಪ್ರದಾಯಿಕ ಕೃಷಿಯ ಜೊತೆಗೆ ನಾವೀನ್ಯ ತಂತ್ರಗಾರಿಕೆಗಳನ್ನು ಆಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ಮಾಡಿದ್ದಾರೆ.

'ಜನತಾ ಕರ್ಫ್ಯೂ' ನೆನಪಿಸಿದ ಮೋದಿ...
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನಾವು 'ಜನತಾ ಕರ್ಫ್ಯೂ' ಆಚರಿಸಿದ್ದೆವು. ಇದು ಶಿಸ್ತಿಗೆ ಉತ್ತಮ ಉದಾಹರಣೆಯಾಗಿದ್ದು, ಇಡೀ ಜಗತ್ತಿಗೆ ಸ್ಫೂರ್ತಿಯಾಗಿದೆ. ಕೊರೊನಾ ಸೇನಾನಿಗಳಿಗೆ ನಮ್ಮ ಗೌರವ ಮತ್ತು ಪ್ರೀತಿಯನ್ನು ತೋರಿದ್ದೇವೆ ಎಂದು ತಿಳಿಸಿದ್ದಾರೆ.

ADVERTISEMENT

ಇಂದು ನಾವು ಜಗತ್ತಿನಲ್ಲೇ ಅತ್ಯಂತ ದೊಡ್ಡ ಕೊರೊನಾ ಲಸಿಕಾ ಅಭಿಯಾನವನ್ನು ನಡೆಸುತ್ತಿದ್ದೇವೆ. ದೇಶದಾದ್ಯಂತ ಜನರು ಲಸಿಕೆಯನ್ನು ಪಡೆಯುತ್ತಿರುವುದನ್ನು ನೋಡಿ ತುಂಬಾನೇ ಸಂತೋಷವಾಗುತ್ತಿದೆ. ಕೇರಳದ ವ್ಯಕ್ತಿಯೊಬ್ಬರು ಇದಕ್ಕೆ 'ಲಸಿಕೆ ಸೇವಾ' ಎಂದು ಹೆಸರಿಸಿದ್ದಾರೆ.

ಮಿಥಾಲಿ ರಾಜ್‌ಗೆ ಅಭಿನಂದನೆ...
ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್ ಮೈಲುಗಲ್ಲು ದಾಟಿದ್ದಾರೆ. ಈ ಸಂದರ್ಭದಲ್ಲಿ ನಾನು ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದು, ಮಹಿಳೆಯರು ಸೇರಿದಂತೆ ಪುರುಷರಿಗೂ ಮಾದರಿಯಾಗಿದ್ದಾರೆ.

ಈ ತಿಂಗಳು ನಾವು ಮಹಿಳಾ ದಿನಚಾರಣೆಯನ್ನು ಆಚರಿಸಿದಾಗ ನಮ್ಮ ಅನೇಕ ಮಹಿಳಾ ಕ್ರೀಡಾಪಟಗಳು ಅತ್ಯುತ್ತಮ ಸಾಧನೆ ಮಾಡಿರುವುದು ಸಂತಸ ತಂದಿದೆ. ಹೆಣ್ಣು ಮಕ್ಕಳು ಕ್ರೀಡೆ ಹಾಗೂ ಜೀವನದ ವಿವಿಧ ವಿಭಾಗಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿರುವುದು ಬಹಳ ಸಂತೋಷ ನೀಡಿದೆ.

ದೆಹಲಿಯಲ್ಲಿ ಆಯೋಜಿಸಿದ್ದ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಭಾರತೀಯ ಮಹಿಳಾ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿ ದಾಖಲೆ ಬರೆದಿದ್ದಾರೆ. ಪದಕ ಬೇಟೆಯಲ್ಲಿಯೂ ಭಾರತ ಮುಂದಿದೆ ಎಂದು ಉಲ್ಲೇಖಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದಿಂದ ಪ್ರೇರಣೆ...
ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅನೇಕ ಕಷ್ಟಗಳನ್ನು ಅನುಭವಿಸಿದ್ದರು. ಯಾಕೆಂದರೆ ದೇಶದ ಹಿತಕ್ಕಾಗಿ ತ್ಯಾಗ ಮಾಡುವುದು ತಮ್ಮ ಕರ್ತವ್ಯ ಎಂದು ಪರಿಗಣಿಸಿದ್ದರು. ಅವರ ತ್ಯಾಗ ಮತ್ತು ಬಲಿದಾನ ನಮ್ಮ ಕರ್ತವ್ಯದ ಹಾದಿಗೆ ನಿರಂತರವಾಗಿ ಪ್ರೇರೇಪಿಸಲಿದೆ ಎಂದು ನುಡಿದರು.

ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಧಾನಿ ಮೋದಿ ಹೇಳಿದರು.

ಕೊಯಮತ್ತೂರಿನ ಬಸ್ ಕಂಡಕ್ಟರ್‌ಗೆ ಸಲಾಂ...
ತಮಿಳುನಾಡಿನ ಕೊಯಮತ್ತೂರಿನ ಬಸ್ ಕಂಡಕ್ಟರ್ ಮಾರಿಮುತ್ತು ಯೋಗನಾಥನ್ ಅವರು ಟಿಕೆಟ್ ಜೊತೆಗೆ ಪ್ರಯಾಣಿಕರಿಗೆ ಉಚಿತ ಸಸಿಗಳನ್ನು ನೀಡುತ್ತಾರೆ. ಇದಕ್ಕಾಗಿ ಅವರು ತಮ್ಮ ಆದಾಯದ ಹೆಚ್ಚಿನ ಆದಾಯವನ್ನು ಖರ್ಚು ಮಾಡುತ್ತಾರೆ. ಅವರ ಪ್ರಯತ್ನಕ್ಕೆ ನನ್ನ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದರು.

ಇದನ್ನೂ ಓದಿ:

ಜೇನು ಕೃಷಿ...
ಅನೇಕ ರೈತರು ಈಗ ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಡಾರ್ಜಿಲಿಂಗ್‌ನ ಗುರ್ದುಮ್ ಗ್ರಾಮದ ಜನರು ಜೇನುನೊಣಗಳ ಸಾಕಾಣಿಕೆಯನ್ನು ಕೈಗೊತ್ತಿಕೊಂಡಿದ್ದು, ಅವರು ತಯಾರಿಸಿದ ಜೇನುತುಪ್ಪಕ್ಕೆ ಗಮನಾರ್ಹ ಬೇಡಿಕೆಯಿದೆ. ಇದರಿಂದ ಅವರ ಆದಾಯವು ಹೆಚ್ಚಾಗಿದೆ. ಸ್ವಾವಲಂಬಿ ಭಾರತ ಅಭಿಯಾನದಲ್ಲಿ ಇದು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.