ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗಿಯಾದ ಮೋದಿ
ನವದೆಹಲಿ: ಇಲ್ಲಿನ ಕ್ಯಾಥೆಡ್ರಲ್ ಚರ್ಚ್‌ನಲ್ಲಿ ನಡೆದ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾದರು. ದೆಹಲಿ ಹಾಗೂ ಉತ್ತರ ಭಾರತದ ವಿವಿಧ ಭಾಗದ ನೂರಾರು ಭಕ್ತರು ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆಗಳು, ಕರೊಲ್‌ಗಳು, ಸ್ತುತಿಗೀತೆಗಳು ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ವಿಶೇಷ ಪ್ರಾರ್ಥನೆ ನಡೆದವು. ದೆಹಲಿಯ ಬಿಷಪ್ ಡಾ. ಪೌಲ್ ಸ್ವರೂಪ್ ನೇತೃತ್ವದಲ್ಲಿ ಪ್ರಾರ್ಥನೆಗಳು ನಡೆದವು.
‘ದೆಹಲಿಯಲ್ಲಿರುವ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಷನ್‌ನಲ್ಲಿ ಬೆಳಿಗ್ಗೆ ನಡೆದ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದೆ. ಈ ಪ್ರಾರ್ಥನೆಯು ಪ್ರೀತಿ, ಶಾಂತಿ ಮತ್ತು ಸಹಾನುಭೂತಿಯ ಕಾಲಾತೀತ ಸಂದೇಶವನ್ನು ಪ್ರತಿಬಿಂಬಿಸುತ್ತದೆ. ಕ್ರಿಸ್ಮಸ್‌ನ ಚೈತನ್ಯವು ಸಮಾಜದಲ್ಲಿ ಸಾಮರಸ್ಯ ಮತ್ತು ಸದ್ಭಾವನೆಯನ್ನು ಪ್ರೇರೇಪಿಸಲಿ’ ಎಂದು ಪ್ರಧಾನಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಅದಕ್ಕೂ ಮುನ್ನ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಕ್ರಿಸ್ಮಸ್ ಶುಭಾಶಯ ಕೋರಿದ್ದರು.
ಕಳೆದ ಕೆಲವು ವರ್ಷಗಳಿಂದ, ಪ್ರಧಾನಿ ಮೋದಿ ಕ್ರಿಶ್ಚಿಯನ್ ಸಮುದಾಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ನಿಯಮಿತವಾಗಿ ಹಾಜರಾಗುತ್ತಿದ್ದಾರೆ.
2023 ರಲ್ಲಿ ಈಸ್ಟರ್ ಸಮಯದಲ್ಲಿ, ದೆಹಲಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2023ರಲ್ಲಿ ದೆಹಲಿಯ ತಮ್ಮ ನಿವಾಸ 7ನೇ ಲೋಕ ಕಲ್ಯಾಣ್ ಮಾರ್ಗದಲ್ಲಿ ಕ್ರಿಸ್ಮಸ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.
2024ರಲ್ಲಿ, ಸಚಿವ ಜಾರ್ಜ್ ಕುರಿಯನ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಭೋಜನಕೂಟದಲ್ಲಿ ಮತ್ತು ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನದಲ್ಲಿ ಮೋದಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.