ನರೇಂದ್ರ ಮೋದಿ
-ಪಿಟಿಐ ಚಿತ್ರ
ಗುವಾಹಟಿ: ಎರಡು ದಿನಗಳ ಅಸ್ಸಾಂ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಭಾನುವಾರ) ದರ್ರಾಂಗ್ ಜಿಲ್ಲೆಯ ಮಂಗಲ್ಡೋಯ್‌ನಲ್ಲಿ ₹6,300 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ದರ್ರಾಂಗ್ ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು ಸೇರಿದಂತೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ₹570 ಕೋಟಿ ವೆಚ್ಚದ ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಇದೇ ವೇಳೆ ₹1,200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ 2.9 ಕಿ.ಮೀ. ಉದ್ದದ ನರೇಂಗಿ-ಕುರುವಾ ಸೇತುವೆ ಮತ್ತು ₹4,530 ಕೋಟಿ ವೆಚ್ಚದ 118.5 ಕಿ.ಮೀ. ಉದ್ದದ ಗುವಾಹಟಿ ರಿಂಗ್ ರಸ್ತೆ ಯೋಜನೆಗೂ ಅವರು ಚಾಲನೆ ನೀಡಿದ್ದಾರೆ.
ಗೋಲಾಘಾಟ್ ಜಿಲ್ಲೆಯ ನುಮಲಿಗಢ ಸಂಸ್ಕರಣಾಗಾರದಲ್ಲಿ ಹೊಸದಾಗಿ ನಿರ್ಮಿಸಲಾದ ₹5,000 ಕೋಟಿ ವೆಚ್ಚದ ಬಿದಿರು ಆಧಾರಿತ ಎಥೆನಾಲ್ ಸ್ಥಾವರ ಮತ್ತು ₹7,230 ಕೋಟಿ ವೆಚ್ಚದ ಪೆಟ್ರೋ ದ್ರವೀಕೃತ ವೇಗವರ್ಧಕ ಕ್ರ್ಯಾಕರ್ ಘಟಕವನ್ನು ನಾಳೆ (ಸೋಮವಾರ) ಮೋದಿ ಅವರು ಉದ್ಘಾಟಿಸಲಿದ್ದಾರೆ.
ಶನಿವಾರ ಸಂಜೆ ಅಸ್ಸಾಂಗೆ ಆಗಮಿಸಿದ ಮೋದಿ ಅವರು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಭೂಪೇನ್ ಹಜಾರಿಕಾ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.
ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಜನಾಂಗೀಯ ಸಂಘರ್ಷ ಆರಂಭಗೊಂಡು ಎರಡಕ್ಕೂ ಹೆಚ್ಚು ವರ್ಷಗಳ ಬಳಿಕ ಮಣಿಪುರಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಚುರಚಾಂದಪುರ ಮತ್ತು ಇಂಫಾಲ್‌ನಲ್ಲಿ ಅಂದಾಜು ₹8,500 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ್ದರು. ಎರಡೂ ಕಡೆಯೂ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.