ನರೇಂದ್ರ ಮೋದಿ
(ಚಿತ್ರ ಕೃಪೆ: X/@narendramodi)
ನವದೆಹಲಿ: ‘ಸಂವಿಧಾನವು ಪ್ರತಿ ಸಂಕಷ್ಟದ ಸಮಯದಲ್ಲಿಯೂ ನಮ್ಮ ನೆರವಿಗೆ ನಿಂತಿದೆ. ನಮ್ಮ ಪಾಲಿಗೆ ಅದು ದಿಕ್ಸೂಚಿ ಬೆಳಕಾಗಿದೆ‘ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಣ್ಣಿಸಿದರು.
‘ಮನದ ಮಾತು’ ತಿಂಗಳ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2025ರ ಜನವರಿ 26ರಂದು ನಮ್ಮ ಸಂವಿಧಾನವು 75 ವರ್ಷಗಳನ್ನು ಪೂರೈಸುತ್ತಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಸಂವಿಧಾನದಿಂದಲೇ ನಾನು ಇಂದು ಈ ಸ್ಥಾನ ತಲುಪಲು ಸಾಧ್ಯವಾಯಿತು’ ಎಂದು ಹೇಳಿದರು.
75 ವರ್ಷಗಳ ಸ್ಮರಣಾರ್ಥ constitution75.com ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಸಂವಿಧಾನದ ಪ್ರಸ್ತಾವನೆಯನ್ನು ಓದಲು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಏಕತೆಯ ಕುಂಭ ಮೇಳ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13ರಿಂದ ಆರಂಭವಾಗಲಿರುವ ‘ಮಹಾ ಕುಭಮೇಳ’ವನ್ನು ‘ಏಕತೆಯ ಮಹಾ ಕುಂಭ’ ಎಂದು ನರೇಂದ್ರ ಮೋದಿ ಬಣ್ಣಿಸಿದರು.
ಮಹಾ ಕುಂಭಮೇಳಕ್ಕೆ ಭೇಟಿ ನೀಡುವ ವಿವಿಧ ಜನರನ್ನು ಉಲ್ಲೇ ಖಿಸಿ, ‘ವಿವಿಧತೆಯಲ್ಲಿ ಏಕತೆಯನ್ನು ಸಾರುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಕುಂಭಮೇಳದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಚಾಟ್‌ಬೋಟ್ ಬಳಸಲಾ ಗುತ್ತಿದ್ದು, ಮೇಳಕ್ಕೆ ಸಂಬಂಧಿಸಿದ ಮಾಹಿತಿಯು ಎಐ ಚಾಟ್‌ಬೋಟ್ ಮೂಲಕ 11 ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿದರು.
ಒಡಿಶಾದ ಕಲಾಹಾಂಡಿ ಜಿಲ್ಲೆಯ ಗೋಲಾಮುಂಡದ ರೈತರು ತಮ್ಮ ಪ್ರದೇಶದಲ್ಲಿ ಮಾಡಿದ ‘ತರಕಾರಿ ಕ್ರಾಂತಿ’ಯನ್ನು ಮೋದಿ ಅವರು ಶ್ಲಾಘಿಸಿದರು.
ಬಡತನ ಮತ್ತು ವಲಸೆಗೆ ಹೆಸರಾಗಿದ್ದ ನೆಲದಲ್ಲಿ, 10 ಮಂದಿ ರೈತರ ಗುಂಪು ಕೃಷಿ ಉತ್ಪನ್ನ ಸಂಸ್ಥೆ ಸ್ಥಾಪಿಸಿತು. ತರಕಾರಿ ಕ್ರಾಂತಿಗಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಿತು. ರೈತರು ಸ್ಥಾಪಿಸಿದ ಸಂಸ್ಥೆಯು ಇಂದು ವಾರ್ಷಿಕ ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುತ್ತಿದೆ ಎಂದು ಹೇಳಿದರು.
ಭಾರತವು ಇದೇ ಮೊದಲ ಬಾರಿಗೆ ಮುಂದಿನ ವರ್ಷ ಫೆಬ್ರುವರಿ ಯಲ್ಲಿ ವಿಶ್ವ ಆಡಿಯೊ ವಿಶುವಲ್ ಎಂಟರ್‌ಟೈನ್‌ಮೆಂಟ್ ಸಮಾವೇಶವನ್ನು (ಡಬ್ಲ್ಯುಎವಿಇಎಸ್) ಆಯೋಜಿಸುತ್ತಿದೆ ಎಂದು ಪ್ರಧಾನಿ ಮೋದಿ
ತಿಳಿಸಿದರು.
ಮೋದಿ ಹೇಳಿದ ಇತರ ಅಂಶಗಳು
* 2015ರಿಂದ 2023ರವರೆಗೆ ದೇಶದಲ್ಲಿ ಮಲೇರಿಯಾ ಪ್ರಕರಣಗಳು ಮತ್ತು ಮರಣ ಪ್ರಮಾಣದಲ್ಲಿ ಶೇ 80ರಷ್ಟು ಇಳಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ
* ಭಾರತದಲ್ಲಿ ಸಕಾಲಕ್ಕೆ ಕ್ಯಾನ್ಸರ್ ಚಿಕಿತ್ಸೆ ಪಡೆಯುವವರ ಪ್ರಮಾಣ ಹೆಚ್ಚಿದೆ ಎಂದು ಲ್ಯಾನ್ಸೆಟ್ ಜರ್ನಲ್ ವರದಿ ಮಾಡಿದೆ. ಈ ದಿಸೆಯಲ್ಲಿ ‘ಆಯುಷ್ಮಾನ್ ಭಾರತ ಯೋಜನೆ’ಯು ಮುಖ್ಯ ಪಾತ್ರ ವಹಿಸಿದೆ
*ರಾಜ್ ಕಪೂರ್ ಮತ್ತು ಮಹಮ್ಮದ್ ರಫಿ ಅವರಂತಹ ಹಲವು ದಿಗ್ಗಜರ ಜನ್ಮ ಶತಮಾನೋತ್ಸವಕ್ಕೆ 2024 ಸಾಕ್ಷಿಯಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.