ADVERTISEMENT

ಕೋವಿಡ್ ಶತಮಾನದ ಬಿಕ್ಕಟ್ಟು, ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು: ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 12:42 IST
Last Updated 30 ಏಪ್ರಿಲ್ 2021, 12:42 IST
ಪ್ರಧಾನಿ ಮೋದಿ -ಪಿಟಿಐ ಚಿತ್ರ
ಪ್ರಧಾನಿ ಮೋದಿ -ಪಿಟಿಐ ಚಿತ್ರ   

ನವದೆಹಲಿ: ಕೋವಿಡ್–19 ಸಾಂಕ್ರಾಮಿಕವು ಶತಮಾನದಲ್ಲಿ ಒಮ್ಮೆ ಬರುವ ಬಿಕ್ಕಟ್ಟಾಗಿದ್ದು, ಪಿಡುಗಿನ ವಿರುದ್ಧದ ಹೋರಾಟದಲ್ಲಿ ಸಮಾಜದ ಪಾಲ್ಗೊಳ್ಳುವಿಕೆಯೂ ಬಹುಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೇಂದ್ರ ಮಂತ್ರಿ ಮಂಡಲದ ಜತೆ ಸಭೆ ನಡೆಸಿದ ಅವರು, ದೇಶವು ಕೋವಿಡ್ ವಿರುದ್ಧ ಜಯ ಗಳಿಸಿ ಮತ್ತೆ ಮೇಲೆದ್ದು ನಿಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸಭೆ ನಡೆಸಿದ ಪ್ರಧಾನಿ, ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರಗಳ ಜನರ ಜತೆ ಸಂಪರ್ಕದಲ್ಲಿರುವಂತೆ ಸಚಿವರಿಗೆ ಸೂಚಿಸಿದ್ದಾರೆ. ಜನರಿಗೆ ಸಹಾಯ ಮಾಡುವುದರ ಜತೆ ಅವರ ಅಭಿಪ್ರಾಯ ಸಂಗ್ರಹಿಸುವಂತೆ ನಿರ್ದೇಶಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಸಮಸ್ಯೆಗಳನ್ನು ತ್ವರಿತವಾಗಿ ಗುರುತಿಸಿ ಅವುಗಳನ್ನು ಪರಿಹರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರದ ಎಲ್ಲಾ ಸಂಸ್ಥೆಗಳು ಒಗ್ಗಟ್ಟಿನಿಂದ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಭೆಯಲ್ಲಿ ಮೋದಿ ಹೇಳಿದ್ದಾರೆ. ಕಳೆದ 14 ತಿಂಗಳುಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಪರಾಮರ್ಶೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.