ADVERTISEMENT

ಒಳನುಸುಳುಕೋರರ ವಿರುದ್ಧದ ಅಸ್ಸಾಂ ಚಳವಳಿ: ಹುತಾತ್ಮರಿಗೆ ಪ್ರಧಾನಿ ಮೋದಿ ನಮನ

ಪಿಟಿಐ
Published 21 ಡಿಸೆಂಬರ್ 2025, 10:27 IST
Last Updated 21 ಡಿಸೆಂಬರ್ 2025, 10:27 IST
<div class="paragraphs"><p>ಅಸ್ಸಾಂ&nbsp;ಚಳವಳಿಯಲ್ಲಿ ಹುತಾತ್ಮರಾದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಮನ ಸಲ್ಲಿಸಿದರು</p></div>

ಅಸ್ಸಾಂ ಚಳವಳಿಯಲ್ಲಿ ಹುತಾತ್ಮರಾದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಮನ ಸಲ್ಲಿಸಿದರು

   

-ಪಿಟಿಐ ಚಿತ್ರ

ಗುವಾಹಟಿ: 1979ರಿಂದ 1985ರವರೆಗೆ ಅಸ್ಸಾಂನಲ್ಲಿ ಒಳನುಸುಳುಕೋರರ ವಿರುದ್ಧ ನಡೆದ ಚಳವಳಿಯಲ್ಲಿ ಹುತಾತ್ಮರಾದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಮನ ಸಲ್ಲಿಸಿದ್ದಾರೆ.

ADVERTISEMENT

ಆರು ವರ್ಷಗಳವರೆಗೆ ನಡೆದಿದ್ದ ಚಳವಳಿಯಲ್ಲಿ 860 ಮಂದಿ ಹುತಾತ್ಮರಾಗಿದ್ದರು. ಚಳವಳಿಯ ಸ್ಮರಣಾರ್ಥವಾಗಿ ಮೋದಿ ಅವರು ‘ಸ್ವಹಿದ್ ಸ್ಮಾರಕ ಕ್ಷೇತ್ರ’ಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಅಸ್ಸಾಂ ಚಳವಳಿಯ ಮೊದಲ ಹುತಾತ್ಮ ಖರ್ಗೇಶ್ವರ್ ತಾಲೂಕ್‌ದಾರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ.

‘ನನಗೂ ಸೇರಿದಂತೆ ಅಸ್ಸಾಂನಲ್ಲಿರುವ ಎಲ್ಲರಿಗೂ ಇದು ಭಾವನಾತ್ಮಕ ಕ್ಷಣ. ಇಂದು, ಪ್ರಧಾನಿ ಮೋದಿ ಅವರು ‘ಸ್ವಹಿದ್ ಸ್ಮಾರಕ ಕ್ಷೇತ್ರ’ಕ್ಕೆ ಭೇಟಿ ನೀಡಿ ಖರ್ಗೇಶ್ವರ ತಾಲೂಕ್‌ದಾರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದಾಗ, ಕಾಂಗ್ರೆಸ್ ಪಕ್ಷವು ಹಲವು ಪ್ರಕರಣಗಳಲ್ಲಿ ರಾಜ್ಯವನ್ನು ಲೂಟಿ ಮಾಡಿದ ಅಸ್ಸಾಂನ ಇತಿಹಾಸದ ಕರಾಳ ದಿನಗಳನ್ನು ನೆನಪಿಸಿಕೊಳ್ಳದೆ ಇರಲು ಸಾಧ್ಯವಾಗಲಿಲ್ಲ. ಅಕ್ರಮ ಒಳನುಸುಳುವಿಕೆಯನ್ನು ಉತ್ತೇಜಿಸುವುದು, ಮಣ್ಣಿನ ಮಕ್ಕಳ ಹತ್ಯಾಕಾಂಡ, ರಾಜ್ಯದ ಆರ್ಥಿಕತೆಯನ್ನು ಪ್ರಪಾತಕ್ಕೆ ಇಳಿಸಿದ್ದೇ ಕಾಂಗ್ರೆಸ್‌ನ ಸಾಧನೆಯಾಗಿತ್ತು’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಇಂದು ಅಸ್ಸಾಂನ ಜನರು ಅಭಿವೃದ್ಧಿಯನ್ನು ಸ್ಮರಿಸುತ್ತಿದ್ದರೆ, ಪ್ರಧಾನಿ ಮೋದಿ ಅವರು ರಾಜ್ಯದ ಸಂಸ್ಕೃತಿಯನ್ನು ರಕ್ಷಿಸುವ ಜನರ ತ್ಯಾಗವನ್ನು ನೆನಪಿಸಿಕೊಂಡಿದ್ದಾರೆ. ಅಸ್ಸಾಂನ ಅಭಿವೃದ್ಧಿಗೆ ಪೂರಕವಾಗಿ ಹಿಂದಿನ ಎಲ್ಲಾ ಪ್ರಧಾನಿಗಳಿಗಿಂತಲೂ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

‘ಮೋದಿ ಜಿ ಅವರು ಅಸ್ಸಾಂನ ಪುನರುಜ್ಜೀವನವನ್ನು ಮುಂಚೂಣಿಯಿಂದ ಮುನ್ನಡೆಸುತ್ತಿದ್ದಾರೆ. ಶಾಂತಿ, ಸಮೃದ್ಧಿ ಮತ್ತು ಸ್ಥಿರತೆ ಕಾಪಾಡುವುದರ ಜತೆಗೆ ಅಸ್ಸಾಂ ಅನ್ನು ಅಭಿವೃದ್ಧಿ ಹಾದಿಗೆ ಕೊಂಡೊಯ್ಯಲು ಡಬಲ್ ಎಂಜಿನ್ ಸರ್ಕಾರ ನಿರಂತವಾಗಿ ಶ್ರಮಿಸುತ್ತಿದೆ’ ಎಂದು ಶರ್ಮಾ ಉಲ್ಲೇಖಿಸಿದ್ದಾರೆ.

ಅಸ್ಸಾಂನ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಒಳನುಸುಳುವಿಕೆ ಅತ್ಯಂತ ವಿವಾದಾತ್ಮಕ ವಿಷಯಗಳಲ್ಲಿ ಒಂದಾಗಿದೆ. ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿಷಯದ ಆಧಾರದ ಮೇಲೆ ಹಲವು ಚುನಾವಣೆಗಳೇ ನಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.