ADVERTISEMENT

ಶಿವಕುಮಾರ ಸ್ವಾಮೀಜಿ ಅಗಲಿಕೆಗೆ ಗಣ್ಯರ ಸಂತಾಪ

ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ, ರಾಹುಲ್ ಗಾಂಧಿ, ರಾಜನಾಥ್ ಸಿಂಗ್ ಸಂತಾಪ

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 10:40 IST
Last Updated 21 ಜನವರಿ 2019, 10:40 IST
   

ಬೆಂಗಳೂರು:ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

‘ಶಿವಕುಮಾರ ಸ್ವಾಮಿಗಳ ಅಗಲುವಿಕೆಯಿಂದ ಬಹಳ ಬೇಸರವಾಗಿದೆ. ಅವರು ಸಮಾಜಕ್ಕೆ, ಅದರಲ್ಲೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ್ದರು’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿದ್ದಾರೆ.

ADVERTISEMENT

‘ಡಾ.ಶಿವಕುಮಾರ ಸ್ವಾಮಿಗಳು ಬಡವರು ಮತ್ತು ಹಿಂದುಳಿದವರಿಗಾಗಿ ಬದುಕಿದವರು. ಬಡತನ, ಹಸಿವು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮನ್ನು ಮೀಸಲಿಟ್ಟಿದ್ದರು. ಬಡವರಿಗೆ ಶಿಕ್ಷಣ ಮತ್ತು ಆರೋಗ್ಯ ಸೇವೆ ಒದಗಿಸಿದವರು. ಅವರು ಹಮ್ಮಿಕೊಂಡಿದ್ದ ಸಮಾಜಸೇವಾ ಕಾರ್ಯಗಳು ಅತ್ಯುತ್ತಮವಾಗಿದ್ದವಲ್ಲದೆ, ಕಲ್ಪಿಸಿಕೊಳ್ಳಲಾರದಷ್ಟು ಬೃಹತ್ತಾಗಿದ್ದವು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಹಿಂದೆ ತಾವು ಮಠಕ್ಕೆ ಭೇಟಿ ನೀಡಿದ್ದಾಗ ಸ್ವಾಮೀಜಿ ಜತೆಗಿದ್ದ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

‘ಶಿವಕುಮಾರ ಸ್ವಾಮೀಜಿ ಅವರನ್ನು ಲಕ್ಷಾಂತರ ಭಾರತೀಯರು, ಎಲ್ಲ ಧಾರ್ಮಿಕ ಮತ್ತು ಸಮುದಾಯಗಳವರೂ ಗೌರವಿಸುತ್ತಿದ್ದರು.ಅವರ ಅಗಲುವಿಕೆಯಿಂದ ಧಾರ್ಮಿಕ ಕ್ಷೇತ್ರದಲ್ಲಿ ಶೂನ್ಯಭಾವ ಆವರಿಸಿದೆ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

‘ಶ್ರೀ ಸಿದ್ದಗಂಗಾ ಮಠದ ಹಿರಿಯ ಯತಿಗಳಾದ ಶ್ರೀ ಶಿವಕುಮಾರ ಶ್ರೀಗಳು ದೈವಾಧೀನರಾಗಿದ್ದು ಅವರ ನಿಧನವು ದೇಶದ ಜನತೆಗೆ ಅಪಾರ ನೋವು ತರಿಸಿದೆ. ಶ್ರೀ ಸ್ವಾಮೀಜಿಯವರು ಸಾಮಾಜಿಕ, ಆಧ್ಯಾತ್ಮಿಕ, ಶೈಕ್ಷಣಿಕ ಕ್ಷೇತ್ರದ ಒಳಿತಿಗಾಗಿ ಮಾಡಿದ ಸೇವೆ ಅತ್ಯಮೂಲ್ಯವಾದುದು. ಅವರ ಈ ಅಗಲಿಕೆ ದೇಶ ಮತ್ತು ಸಮಾಜಕ್ಕಾದ ದೊಡ್ಡ ನಷ್ಟ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.