ADVERTISEMENT

ಪ್ರಧಾನಿಗೆ 'ಲತಾ ದೀನಾನಾಥ್ ಮಂಗೇಶ್ಕರ್' ಪ್ರಶಸ್ತಿ: ರಾಖಿಯಲ್ಲಿ ದೀದಿ ನೆನಪು–ಮೋದಿ

ಪಿಟಿಐ
Published 24 ಏಪ್ರಿಲ್ 2022, 14:55 IST
Last Updated 24 ಏಪ್ರಿಲ್ 2022, 14:55 IST
'ಲತಾ ದೀನಾನಾಥ್‌ ಮಂಗೇಶ್ಕರ್‌' ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ
'ಲತಾ ದೀನಾನಾಥ್‌ ಮಂಗೇಶ್ಕರ್‌' ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ   

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ 'ಲತಾ ದೀನಾನಾಥ್‌ ಮಂಗೇಶ್ಕರ್‌' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜನಪ್ರಿಯ ಗಾಯಕಿ, ದಿವಂಗತ ಲತಾ ಮಂಗೇಶ್ಕರ್‌ ಅವರನ್ನು ಅಕ್ಕನ ರೀತಿ ಕಾಣುತ್ತಿದ್ದ ಮೋದಿ ಅವರಿಗೆ ಮೊದಲ ವರ್ಷದ ಈ ಪುರಸ್ಕಾರ ಸಂದಿದೆ.

ಇದೇ ವರ್ಷ ಫೆಬ್ರುವರಿಯಲ್ಲಿ ಬಹುಅಂಗಾಂಗ ವೈಫಲ್ಯದಿಂದ ಲತಾ ಮಂಗೇಶ್ಕರ್‌ (92) ನಿಧನರಾದರು.

'ಲತಾ ದೀದಿ, ಮಧುರ ಗಾನದ ಮಹಾರಾಣಿಯಾಗಿದ್ದರ ಜೊತೆಗೆ ನನ್ನ ಅಕ್ಕ ಸಹ ಆಗಿದ್ದರು. ಅವರು ತಲೆಮಾರುಗಳಿಗೆ ಪ್ರೀತಿ ಮತ್ತು ಕರುಣೆಯನ್ನು ಕಲಿಸಿದರು. ನನ್ನನ್ನು ಅವರು ಅಕ್ಕನಂತೆ ಪ್ರೀತಿಸಿದ್ದು ಅದೃಷ್ಟವೆಂದೆ ಭಾವಿಸುತ್ತೇನೆ' ಎಂದು ಪ್ರಧಾನಿ ಮೋದಿ ಹೇಳಿದರು.

ADVERTISEMENT

ಹಲವು ದಶಕಗಳ ಬಳಿಕ ದೀದಿ ಇಲ್ಲದೆಯೇ ಮೊದಲ ರಾಖಿ ಹಬ್ಬ ನಡೆಯಲಿದೆ ಎಂದು ಮೋದಿ ಅವರು ಲತಾ ಮಂಗೇಶ್ಕರ್‌ ಅವರನ್ನು ನೆನಪಿಸಿಕೊಂಡರು.

'ಗ್ರಾಮಾಫೋನ್‌ ಕಾಲದಿಂದ ಹಿಡಿದು ಸಿಡಿ, ಡಿವಿಡಿ, ಪೆನ್‌ ಡ್ರೈವ್‌, ಡಿಜಿಟಲ್‌ ಮ್ಯೂಸಿಕ್‌ನಿಂದ ಆ್ಯಪ್‌ಗಳ ವರೆಗೂ ಸಮಾರು 80 ವರ್ಷ ಲತಾ ಮಂಗೇಶ್ಕರ್‌ ಅವರ ದನಿಯು ಕೇಳುಗರನ್ನು ಪರವಶಗೊಳಿಸಿದೆ' ಎಂದರು.

ಐದು ತಲೆಮಾರಿನ ಕಲಾವಿದರಿಗೆ ಅವರು ದನಿಯಾಗಿದ್ದನ್ನು ಪ್ರಸ್ತಾಪಿಸಿ, ''ಅವರು ಭಾರತ ಸ್ವತಂತ್ರವಾಗುವುದಕ್ಕೂ ಮುನ್ನವೇ ದೇಶಕ್ಕೆ ದನಿ ನೀಡಿದ್ದರು. ದೇಶದ 75 ವರ್ಷಗಳ ಪಯಣವು ಅವರ ಸ್ವರದೊಂದಿಗೆ ಬೆರೆತಿದೆ. ಮಂಗೇಶ್ಕರ್‌ ಕುಟುಂಬದ ಕೊಡುಗೆಯನ್ನು ಇಡೀ ರಾಷ್ಟ್ರವು ಸ್ಮರಿಸುತ್ತದೆ. ಗಾಯನ ಜೊತೆಗೆ ದೀದಿ ಅವರಲ್ಲಿ ಅವರ ತಂದೆಯಿಂದಾಗಿ 'ರಾಷ್ಟ್ರ ಭಕ್ತಿಯು' ಮನೆ ಮಾಡಿತ್ತು'' ಎಂದು ಹೇಳಿದರು.

ದೀನಾನಾಥ್‌ ಮಂಗೇಶ್ಕರ್‌ ಅವರ 80ನೇ ಪುಣ್ಯತಿಥಿಯ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಾಷ್ಟ್ರ, ಸಮಾಜ ಮತ್ತು ಜನರಿಗೆ ಅಸಾಮಾನ್ಯ ಕೊಡುಗೆ ನೀಡಿರುವವರಿಗೆ ಪ್ರತಿ ವರ್ಷ 'ಲತಾ ದೀನಾನಾಥ್‌ ಮಂಗೇಶ್ಕರ್‌' ಪುರಸ್ಕಾರ ನೀಡಲಾಗುತ್ತದೆ ಎಂದು ಮಾಸ್ಟರ್‌ ದೀನಾನಾಥ್‌ ಮಂಗೇಶ್ಕರ್‌ ಸ್ಮೃತಿ ಪ್ರತಿಷ್ಠಾನ ಚಾರಿಟೆಬಲ್‌ ಟ್ರಸ್ಟ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.