ADVERTISEMENT

ಇಂದಿನಿಂದ ರಂಜಾನ್ ಉಪವಾಸ ಆಚರಣೆ: ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮಾರ್ಚ್ 2023, 3:54 IST
Last Updated 24 ಮಾರ್ಚ್ 2023, 3:54 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಬೆಂಗಳೂರು: ಮುಸ್ಲಿಮರ ಪವಿತ್ರ ರಂಜಾನ್ ಮಾಸ ಇಂದಿನಿಂದ (ಶುಕ್ರವಾರ) ಆರಂಭಗೊಳ್ಳಲಿದ್ದು, ಇನ್ನೊಂದು ತಿಂಗಳು ಉಪವಾಸ ಆಚರಣೆ ನಡೆಯಲಿದೆ.

ಮೊದಲ ಉಪವಾಸ ಆಚರಿಸುವ ಮುಸ್ಲಿಮರು ಸೂರ್ಯಾಸ್ತದ ಬಳಿಕ ‘ಇಫ್ತಾರ್‌’ ಮೂಲಕ ಉಪವಾಸ ತೊರೆವರು. ರಾತ್ರಿ ಮಸೀದಿಗಳಿಗೆ ತೆರಳಿ ನಮಾಜ್‌ನಲ್ಲಿ ಪಾಲ್ಗೊಳ್ಳುವರು.

ರಂಜಾನ್ ಉಪವಾಸ ಆಚರಣೆ ಪ್ರಯುಕ್ತ ಶುಭಾಶಯ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ರಂಜಾನ್ ಮಾಸದ ಶುಭಾಶಯಗಳು. ಈ ಪವಿತ್ರ ತಿಂಗಳು ನಮ್ಮ ಸಮಾಜದಲ್ಲಿ ಹೆಚ್ಚಿನ ಏಕತೆ ಮತ್ತು ಸಾಮರಸ್ಯವನ್ನು ತರಲಿ. ಇದು ಬಡವರ ಸೇವೆಯ ಮಹತ್ವವನ್ನು ಪುನರುಚ್ಚರಿಸಲಿ’ ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

ಕಲ್ಲಂಗಡಿ, ಕರ್ಬೂಜ ಹಣ್ಣಿಗೆ ಬೇಡಿಕೆ
ಮುಸ್ಲಿಮರ ಪವಿತ್ರ ರಂಜಾನ್ ಮಾಸ ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಮಾರುಕಟ್ಟೆಯಲ್ಲಿ ಕಲ್ಲಂಗಡಿ, ಕರ್ಬೂಜ ಸೇರಿದಂತೆ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ.

ತರಕಾರಿ ಮಾರುಕಟ್ಟೆ ಹಾಗೂ ಹಣ್ಣಿನ ಅಂಗಡಿಗಳಲ್ಲಿ ಗ್ರಾಹಕರು ಕಲ್ಲಂಗಡಿ ಹಾಗೂ ಕರ್ಬೂಜ ಹಣ್ಣುಗಳನ್ನು ಖರೀದಿಸುತ್ತಿದ್ದ ದೃಶ್ಯ ಹಲವೆಡೆ ಕಂಡುಬಂತು.

ರಂಜಾನ್ ಮಾಸದಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಯಾಗುವ ಹೇರಳ ಪೌಷ್ಟಿಕಾಂಶಗಳನ್ನು ಹೊಂದಿರುವ ಖರ್ಜೂರದ ಹಣ್ಣಿನ ಮಾರಾಟ ಹೆಚ್ಚಾಗಿದೆ. ಹೊರ ರಾಜ್ಯ, ವಿದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಖರ್ಜೂರ ಮಾರುಕಟ್ಟೆಗೆ ಬರುತ್ತಿದೆ ಎಂದು ವ್ಯಾಪಾರಿ ರಫೀಕ್ ಮಾಹಿತಿ ನೀಡಿದ್ದಾರೆ.

ಬೇಸಗೆಯ ದಗೆಯೂ ಏರುತ್ತಿರುವುದರಿಂದ ಹೆಚ್ಚು ನೀರಿನಂಶ ಹಾಗೂ ದೇಹಕ್ಕೆ ತಂ‍ಪು ನೀಡುವ ಕಲ್ಲಂಗಡಿ ಹಾಗೂ ಕರ್ಬೂಜ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಕಲ್ಲಂಗಡಿ ಕೆ.ಜಿಗೆ ₹20 ರಿಂದ ₹25 ಇದ್ದರೆ, ಕರ್ಬೂಜ ₹35 ರಿಂದ ₹40 ಇದೆ. ಗ್ರಾಹಕರ ಅಗತ್ಯಕ್ಕೆ ತಕ್ಕಷ್ಟು ಹಣ್ಣು ಮಾರುಕಟ್ಟೆಗೆ ಬರುತ್ತಿಲ್ಲವಾದ್ದರಿಂದ ಬೆಲೆ ಏರಿಕೆಯಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

ಪಪ್ಪಾಯ ದರ ಹೆಚ್ಚಳ: ಸಾಮಾನ್ಯವಾಗಿ ಕೆ.ಜಿಗೆ ₹30ಕ್ಕೆ ಲಭ್ಯವಾಗುತ್ತಿದ್ದ ಪಪ್ಪಾಯ ₹50 ಮುಟ್ಟಿದೆ. ಏಲಕ್ಕಿ ಬಾಳೆಹಣ್ಣಿನ ದರವೂ ಏರುಗತಿಯಲ್ಲಿದ್ದು ಕೆ.ಜಿಗೆ ₹85 ರಿಂದ ₹90 ಇದೆ. ಚಳಿಗಾಲದ ಬಳಿಕ ಮಾರುಕಟ್ಟೆಗೆ ಸೇಬಿನ ಆವಕ ಕಡಿಮೆಯಾಗಿದ್ದು ದರ ಹೆಚ್ಚಾಗಿದೆ. 2 ತಿಂಗಳ ಹಿಂದೆ ಕೆ.ಜಿಗೆ ₹120ಕ್ಕೆ ಸಿಗುತ್ತಿದ್ದ ಶಿಮ್ಲಾ ಸೇಬು ₹180ಕ್ಕೆ ಏರಿಕೆಯಾಗಿದೆ.

ಮೋಸಂಬಿಯೂ ₹100 ಮುಟ್ಟಿದ್ದು, ಕಿತ್ತಲೆ ₹80, ಸಪೋಟ ₹70, ದಾಳಿಂಬೆ ₹200, ಹಸಿರು ದ್ರಾಕ್ಷಿ ₹70, ಕಪ್ಪು ದ್ರಾಕ್ಷಿ 120ಕ್ಕೆ ಮಾರಾಟವಾಗುತ್ತಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.