ADVERTISEMENT

ಲಸಿಕೆ ಕುರಿತು ಮೋದಿಯವರ ವಿಳಂಬ ನಿರ್ಧಾರ ಅನೇಕರ ಸಾವಿಗೆ ಕಾರಣ: ಮಮತಾ

ಪಿಟಿಐ
Published 7 ಜೂನ್ 2021, 16:53 IST
Last Updated 7 ಜೂನ್ 2021, 16:53 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಚಿತ್ರ)
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಚಿತ್ರ)   

ಕೋಲ್ಕತ್ತ: 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಬಗ್ಗೆ ಈ ಹಿಂದೆಯೇ ನಿರ್ಧಾರ ಕೈಗೊಳ್ಳಬೇಕಿತ್ತು. ಪ್ರಧಾನಿ ನರೇಂದ್ರ ಮೋದಿಯವರ ವಿಳಂಬ ನಿರ್ಧಾರದಿಂದ ಅನೇಕರು ಜೀವ ಕಳೆದುಕೊಳ್ಳುವಂತಾಯಿತು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

ಮೋದಿಯವರ ಉಚಿತ ಲಸಿಕೆ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಗಳ ಬೇಡಿಕೆ ಆಲಿಸಲು ಅವರಿಗೆ (ಮೋದಿ) ನಾಲ್ಕು ತಿಂಗಳುಗಳೇ ಬೇಕಾಯಿತು ಎಂದು ಹೇಳಿದ್ದಾರೆ.

‘ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ನಮ್ಮ ದೀರ್ಘಕಾಲದ ಬೇಡಿಕೆ ಬಗ್ಗೆ ಫೆಬ್ರುವರಿ 21ರಂದು ಮತ್ತು ಹಲವು ಬಾರಿ ಪ್ರಧಾನಿಗೆ ಪತ್ರ ಬರೆದಿದ್ದೆ. ಇದನ್ನು ಕೇಳಲು ಅವರಿಗೆ ನಾಲ್ಕು ತಿಂಗಳು ಬೇಕಾಯಿತು. ಅಂತಿಮವಾಗಿ, ಬಹಳ ಒತ್ತಡದ ಬಂದ ಮೇಲೆ ಅವರು ನಮ್ಮ ಮಾತನ್ನು ಕೇಳಿದ್ದಾರೆ. ನಾವು ಹೇಳಿರುವುದನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ’ ಎಂದು ಮಮತಾ ಟ್ವೀಟ್ ಮಾಡಿದ್ದಾರೆ.

‘ಈ ಸಾಂಕ್ರಾಮಿಕದ ಆರಂಭದಿಂದಲೂ ದೇಶದ ಜನರ ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕಿತ್ತು. ದುರದೃಷ್ಟವಶಾತ್, ಮೋದಿಯವರ ವಿಳಂಬದ ನಿರ್ಧಾರವು ಅನೇಕರು ಜೀವ ಕಳೆದುಕೊಳ್ಳಲು ಕಾರಣವಾಯಿತು. ಈ ಬಾರಿ ಲಸಿಕಾ ಅಭಿಯಾನ ಪ್ರಚಾರ ಕೇಂದ್ರೀಕೃತವಾಗಿರದೆ ಜನಪರವಾಗಿರಲಿ ಎಂದು ಆಶಿಸುತ್ತೇನೆ’ ಎಂದು ಅವರು ಉಲ್ಲೇಖಿಸಿದ್ದಾರೆ.

ಇಂದು (ಸೋಮವಾರ) ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.