ADVERTISEMENT

ಕುಟುಂಬ ರಾಜಕಾರಣದಿಂದ ದೇಶಕ್ಕೆ ದೊಡ್ಡ ಅಪಾಯ: ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಫೆಬ್ರುವರಿ 2022, 10:17 IST
Last Updated 8 ಫೆಬ್ರುವರಿ 2022, 10:17 IST
ಪ್ರಧಾನಿ ನರೇಂದ್ರ ಮೋದಿ – ಐಎಎನ್‌ಎಸ್ ಚಿತ್ರ
ಪ್ರಧಾನಿ ನರೇಂದ್ರ ಮೋದಿ – ಐಎಎನ್‌ಎಸ್ ಚಿತ್ರ   

ನವದೆಹಲಿ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿರುದ್ಧದ ವಾಗ್ದಾಳಿಯನ್ನು ಮಂಗಳವಾರವೂ ಮುಂದುವರಿಸಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷದ ಕೆಲವರು 1947ರ ಬಳಿಕವೇ ಭಾರತ ಉದಯಿಸಿರುವುದಾಗಿ ಭಾವಿಸಿದ್ದಾರೆ ಎಂದು ಹೇಳಿದ್ದಾರೆ.

‘ಪ್ರಜಾಪ್ರಭುತ್ವ ಮತ್ತು ಚರ್ಚೆಗಳು ಶತಮಾನಗಳಿಂದ ಭಾರತದ ಅಂಗವಾಗಿವೆ. ಭಾರತ ಎಂಬುದು ಕಾಂಗ್ರೆಸ್‌ನ ಕೃಪೆಯಲ್ಲ’ ಎಂದು ಮೋದಿ ಹೇಳಿದ್ದಾರೆ.

ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಿದ ಮೋದಿ, ಕುಟುಂಬ ರಾಜಕಾರಣವು ಪ್ರಜಾಪ್ರಭುತ್ವಕ್ಕೆ ತಗುಲಬಹುದಾದ ಅತಿಕೆಟ್ಟ ಅಂಶ. ದೇಶದ ಮೇಲೆ ಒಂದು ಕುಟುಂಬ ಪ್ರಾಬಲ್ಯ ಸಾಧಿಸಿದಾಗ ದೊಡ್ಡ ಅಪಾಯವಿದೆ ಎಂದು ಹೇಳಿದ್ದಾರೆ.

ADVERTISEMENT

ತನ್ನ ಹಿರಿಯರು ಮಾಡಿರುವ ತಪ್ಪುಗಳ ಆಧಾರದಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಪಕ್ಷವು ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಮೋದಿ ಟೀಕಿಸಿದ್ದಾರೆ.

ಮೋದಿ ಅವರು ವಾಗ್ದಾಳಿ ಮುಂದುವರಿಸುತ್ತಿದ್ದಂತೆಯೇ, ಇದನ್ನು ಪ್ರತಿಭಟಿಸಿ ಕಾಂಗ್ರೆಸ್ ಸದಸ್ಯರು ಸದನದಿಂದ ಹೊರನಡೆದರು.

ಸೋಮವಾರ ಲೋಕಭೆಯಲ್ಲಿಯೂ ಪ್ರಧಾನಿಯವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

‘ಕಾಂಗ್ರೆಸ್ ಪಕ್ಷದ್ದು ಒಡೆದು ಆಳುವ ನೀತಿ. ಅದೇ ಕಾರಣಕ್ಕೆ ಈಗ ಅದು ‘ತುಕ್ಡೆ ತುಕ್ಡೆ ಗ್ಯಾಂಗ್‌’ಗೆ ನಾಯಕನಾಗಿದೆ. ಆ ಪಕ್ಷದ ಮುಖಂಡರ ಹೇಳಿಕೆ, ನಡವಳಿಕೆ ಗಮನಿಸಿದರೆ 100 ವರ್ಷ ಅಧಿಕಾರದಿಂದ ದೂರವಿರಲು ನಿರ್ಧರಿಸಿದಂತಿದೆ. ಹಲವು ಚುನಾವಣೆಗಳಲ್ಲಿ ಸೋತ ಬಳಿಕವೂ ಕಾಂಗ್ರೆಸ್ 'ಅಹಂಕಾರ'ದಲ್ಲಿ ಕಡಿಮೆ ಆಗಿಲ್ಲ‘ ಎಂದು ಲೋಕಸಭೆಯಲ್ಲಿ ಮೋದಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.