ADVERTISEMENT

ಭದ್ರತಾ ಲೋಪ: ಪಂಜಾಬ್ ಚುನಾವಣೆ ವೇಳೆ ರಾಷ್ಟ್ರಪತಿ ಆಳ್ವಿಕೆಗೆ ಖಟ್ಟರ್ ಆಗ್ರಹ

ಪಿಟಿಐ
Published 7 ಜನವರಿ 2022, 12:45 IST
Last Updated 7 ಜನವರಿ 2022, 12:45 IST
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್   

ಚಂಡೀಗಢ: ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ನೇತೃತ್ವದ ಪಂಜಾಬ್ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯಡಿ ಮುಂಬರುವ ಚುನಾವಣೆ ನಡೆಸುವಂತೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶುಕ್ರವಾರ ಒತ್ತಾಯಿಸಿದ್ದಾರೆ.

ಬುಧವಾರ ಪಂಜಾಬ್‌ನಲ್ಲಿ ಪ್ರಧಾನಿ ಭೇಟಿ ವೇಳೆ ಸಂಭವಿಸಿದ ಭದ್ರತಾ ಲೋಪವನ್ನು ಉಲ್ಲೇಖಿಸಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಲಿಲ್ಲ ಎಂದು ಅವರು ಆರೋಪಿಸಿದರು.

ಖಟ್ಟರ್ ಅವರು ಗೃಹ ಸಚಿವ ಅನಿಲ್ ವಿಜ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಒಪಿ ಧನಕರ್ ಅವರೊಂದಿಗೆ ರಾಜಭವನದಲ್ಲಿ ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ಫಿರೋಜ್‌ಪುರ ಘಟನೆಗೆ ಸಂಬಂಧಿಸಿದಂತೆ ಜ್ಞಾಪಕ ಪತ್ರವನ್ನು ಸಲ್ಲಿಸಿದರು. ಪಂಜಾಬ್ ಸರ್ಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿ ನಾವು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ ಎಂದು ಖಟ್ಟರ್ ನಂತರ ಸುದ್ದಿಗಾರರಿಗೆ ತಿಳಿಸಿದರು. ‘ಪಂಜಾಬ್ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು, ಅದರ ಅಡಿಯಲ್ಲಿ ಅಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ನಡೆಸಬೇಕು ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದೇನೆ’ಎಂದು ಖಟ್ಟರ್ ಮಾಧ್ಯಮಗಳಿಗೆ ತಿಳಿಸಿದರು.

ADVERTISEMENT

‘ಮುಂಬರುವ ಚುನಾವಣೆಯಲ್ಲಿ, ವಿವಿಧ ಪಕ್ಷಗಳ ರಾಜಕೀಯ ನಾಯಕರು ಪ್ರಚಾರ ನಡೆಸಲಿದ್ದಾರೆ ಮತ್ತು ಪ್ರಧಾನಿ ಕೂಡ ಮತ್ತೆ ಪಂಜಾಬ್‌ಗೆ ಭೇಟಿ ನೀಡಲಿದ್ದಾರೆ. ಪಂಜಾಬ್‌ ಆಡಳಿತವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗುವುದಿಲ್ಲ ಎಂದು ತೋರುತ್ತಿದೆ’ಎಂದು ಅವರು ಹೇಳಿದರು.

ಫಿರೋಜ್‌ಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕೆಲವು ‘ಕಾಂಗ್ರೆಸ್ ಗೂಂಡಾಗಳು’ಪ್ರಧಾನಿಯವರ ಬೆಂಗಾವಲು ಪಡೆಯನ್ನು ಹಲವು ನಿಮಿಷಗಳ ಕಾಲ ಹೇಗೆ ತಡೆದರು ಎಂದು ಜ್ಞಾಪನಾಪತ್ರದಲ್ಲಿ ಉಲ್ಲೇಖಿಸಲಾಗಿದೆ.
‘ನಮ್ಮದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ರಾಜ್ಯವೊಂದರಲ್ಲಿ ಪ್ರಧಾನಿ ಕಾರ್ಯಕ್ರಮಕ್ಕೆ ಅಡೆತಡೆಗಳನ್ನು ಸೃಷ್ಟಿಸಿದ ರೀತಿ ಸ್ವೀಕಾರಾರ್ಹವಲ್ಲ’ಎಂದು ಖಟ್ಟರ್ ಹೇಳಿದರು. ‘ಪರ್ಯಾಯ ಮಾರ್ಗಕ್ಕೆ ಏಕೆ ವ್ಯವಸ್ಥೆ ಮಾಡಲಿಲ್ಲ? ಸರ್ಕಾರ ಪ್ರಧಾನಿ ಸಂಚರಿಸುವ ರಸ್ತೆಯನ್ನು ಸುಗಮಗೊಳಿಸಬೇಕಿತ್ತು. ಅಲ್ಲಿ ಪ್ರತಿಭಟನಾಕಾರರು ಬಂದಿದ್ದು ಹೇಗೆ? ಎಂಬುದನ್ನು ನಂಬುವುದು ಕಷ್ಟ’ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.