ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 9 ರಂದು ಮಧ್ಯಪ್ರದೇಶದ ಬೀದಿಬದಿ ವ್ಯಾಪಾರಿಗಳೊಂದಿಗೆ 'ಸ್ವನಿಧಿ ಸಂವಾದ' ನಡೆಸಲಿದ್ದಾರೆ.
ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಈ ವಿಚಾರವನ್ನು ತಿಳಿಸಲಾಗಿದೆ.
ಕೊರೊನಾ ವೈರಸ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ಬೀದಿಬದಿ ವ್ಯಾಪಾರಿಗಳಿಗೆ ನೆರವಾಗುವಂತೆ ಸರ್ಕಾರ ಜೂನ್ 1ರಂದು 'ಪಿಎಂ ಸ್ವನಿಧಿ' ಯೋಜನೆಯನ್ನು ಪ್ರಾರಂಭಿಸಿತ್ತು. 'ಮಧ್ಯಪ್ರದೇಶದ 4.5 ಲಕ್ಷ ಬೀದಿ ವ್ಯಾಪಾರಿಗಳು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 4 ಲಕ್ಷಕ್ಕೂ ಹೆಚ್ಚಿನ ಮಾರಾಟಗಾರರಿಗೆ ಗುರುತಿನ ಮತ್ತು ವ್ಯಾಪಾರ ಅನುಮತಿ ಪತ್ರವನ್ನು ನೀಡಲಾಗಿದೆ'.
2.45 ಲಕ್ಷ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಪೋರ್ಟಲ್ ಮೂಲಕ ಬ್ಯಾಂಕುಗಳಿಗೆ ಸಲ್ಲಿಸಲಾಗಿದೆ. ಅದರಲ್ಲಿ ಸುಮಾರು 1.4 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ₹ 140 ಕೋಟಿ ಮೌಲ್ಯದ ಸಾಲ ಸೌಲಭ್ಯಕ್ಕೆ ಒಪ್ಪಿಗೆ ನೀಡಲಾಗಿದೆ. ದೇಶದಾದ್ಯಂತ ಸ್ವೀಕರಿಸಿದ ಒಟ್ಟು ಅರ್ಜಿಗಳ ಸಂಖ್ಯೆಯಲ್ಲಿ ಮಧ್ಯಪ್ರದೇಶ ರಾಜ್ಯ ಮೊದಲ ಸ್ಥಾನದಲ್ಲಿದೆ, ಇವುಗಳಲ್ಲಿ ಶೇ 47ರಷ್ಟು ರಾಜ್ಯದಿಂದಲೇ ಬಂದಿದೆ.
ಯೋಜನೆಯ ಫಲಾನುಭವಿಗಳಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮವನ್ನು ಎಲ್ಇಡಿ ಪರದೆಗಳ ಸಹಾಯದಿಂದ ವೀಕ್ಷಿಸಲು 378 ಪುರಸಭೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
'ಕಾರ್ಯಕ್ರಮವನ್ನು ವೆಬ್‌ಕಾಸ್ಟ್ ಮೂಲಕ ಪ್ರಸಾರ ಮಾಡಲಾಗುತ್ತದೆ. ಇದಕ್ಕಾಗಿ MyGovನ ಲಿಂಕ್ https://pmevents.ncog.gov.in/ ನಲ್ಲಿ ನೋಂದಣಿ ಮಾಡಲಾಗುತ್ತಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ'.
ಪ್ರಧಾನಿ ಮೋದಿ ಅವರು ರಾಜ್ಯದ ಮೂವರು ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಕಾರ್ಯಕ್ರಮದ ವೇಳೆ ರಾಜ್ಯವು ಸಿದ್ಧಪಡಿಸಿದ ಯೋಜನೆಯೊಂದನ್ನು ಸಹ ತೋರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.