ADVERTISEMENT

ಕೋವಿಡ್‌ ಏರುಗತಿ | 4 ವಾರ ನಿರ್ಣಾಯಕ, ಜನರ ವರ್ತನೆಯೇ ಇದಕ್ಕೆ ಕಾರಣ ಎಂದ ಕೇಂದ್ರ

ಆತಂಕದ ಸ್ಥಿತಿ ಇರುವ 3 ರಾಜ್ಯಗಳಿಗೆ ಪರಿಣತರ ತಂಡ

ಪಿಟಿಐ
Published 6 ಏಪ್ರಿಲ್ 2021, 20:50 IST
Last Updated 6 ಏಪ್ರಿಲ್ 2021, 20:50 IST
ಮುಂಬೈನಲ್ಲಿ ಕೋವಿಡ್ ವಿರುದ್ಧ ಜಾಗೃತಿಗಾಗಿ ಗೋಡೆಯ ಮೇಲೆ ಚಿತ್ರಿಸಲಾದ ಸೋಂಕಿನ ಚಿತ್ರದ ಬಳಿ ನಾಗರಿಕರೊಬ್ಬರು ಮಂಗಳವಾರ ನಡೆದು ಹೋಗುತ್ತಿರುವುದು
ಮುಂಬೈನಲ್ಲಿ ಕೋವಿಡ್ ವಿರುದ್ಧ ಜಾಗೃತಿಗಾಗಿ ಗೋಡೆಯ ಮೇಲೆ ಚಿತ್ರಿಸಲಾದ ಸೋಂಕಿನ ಚಿತ್ರದ ಬಳಿ ನಾಗರಿಕರೊಬ್ಬರು ಮಂಗಳವಾರ ನಡೆದು ಹೋಗುತ್ತಿರುವುದು   

ನವದೆಹಲಿ: ‘ಕೋವಿಡ್–19 ಪರಿಸ್ಥಿತಿ ದೇಶದಲ್ಲಿ ಹದಗೆಡುತ್ತಿದ್ದು, ಸೋಂಕು ತ್ವರಿತಗತಿಯಲ್ಲಿ ಹರಡುತ್ತಿದೆ. ಮುಂದಿನ ನಾಲ್ಕು ವಾರಗಳ ಅವಧಿ ಗಂಭೀರ ಮತ್ತು ನಿರ್ಣಾಯಕವಾಗಿದೆ’ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.

‘ಎರಡನೇ ಅಲೆಯಲ್ಲಿ ಕೋವಿಡ್‌–19 ಪರಿಣಾಮ ತೀವ್ರವಾಗದಂತೆ ತಡೆಯಲು ಜನರ ಸಹಭಾಗಿತ್ವವು ಮುಖ್ಯ’ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್‌ ಮಂಗಳವಾರ ತಿಳಿಸಿದರು.

‘ಕೋವಿಡ್‌ ಸ್ಥಿತಿ ಎದುರಿಸಲು ಇರುವ ಕ್ರಮಗಳು ಬದಲಾಗಿಲ್ಲ. ಸೂಕ್ತವಾದ ವರ್ತನೆ, ನಿಯಂತ್ರಣ ಕ್ರಮಗಳು, ಸೋಂಕು ಪತ್ತೆ ಪರೀಕ್ಷೆಯನ್ನು ಹೆಚ್ಚಿಸುವುದು, ವೈದ್ಯಕೀಯ ಸೌಲಭ್ಯ ಉತ್ತಮಪಡಿಸುವುದು ಹಾಗೂ ಲಸಿಕೆ ನೀಡುವ ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸುವುದು ಅಗತ್ಯವಾಗಿದೆ’ ಎಂದು ಅವರು ಹೇಳಿದರು.

ADVERTISEMENT

ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಪಾಡಿಕೊಳ್ಳುವುದು, ಸಮೂಹದಲ್ಲಿ ಸೇರದೇ ಇರುವುದು ಇತ್ಯಾದಿ ಕ್ರಮಗಳನ್ನು ಆಂದೋಲನದ ಮಾದರಿಯಲ್ಲಿಯೇ ಅನುಸರಿಸಬೇಕಾಗಿದೆ. ಕಳೆದ ಬಾರಿಗಿಂತಲೂ ಈಗ ತ್ವರಿತಗತಿಯಲ್ಲಿ ಸೋಂಕು ಹಬ್ಬುತ್ತಿದೆ. ಕೆಲ ರಾಜ್ಯಗಳಲ್ಲಿ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದರೆ, ಇನ್ನು ಕೆಲ ರಾಜ್ಯಗಳಲ್ಲಿ ಏರುಗತಿಯಲ್ಲಿದೆ ಎಂದು ವಿವರಿಸಿದರು.

ಉನ್ನತ ಮಟ್ಟದ ಸಭೆ: ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಪ್ರಕರಣಗಳು ಏರುಗತಿಯಲ್ಲಿ ಇರಲು ಜನರ ಧೋರಣೆಯೇ ಕಾರಣ ಎಂದು ಅಭಿಪ್ರಾಯಪಟ್ಟಿತು.

ಪ್ರಧಾನಮಂತ್ರಿಗಳ ಕಚೇರಿ ಈ ಕುರಿತು ಹೇಳಿಕೆ ನೀಡಿದ್ದು, ಕೋವಿಡ್‌ ಸಾವಿನ ಸಂಖ್ಯೆ ತಗ್ಗಿಸಲು ಮಾರ್ಗಸೂಚಿ ನಿಯಮಗಳ ಪಾಲನೆ ಕುರಿತು ಕಟ್ಟುನಿಟ್ಟಿನ ಕ್ರಮಜರುಗಿಸಬೇಕು ಎಂದು ರಾಜ್ಯಗಳಿಗೆ ತಾಕೀತು ಮಾಡಿದೆ.

ದುಪ್ಪಟ್ಟು ಅವಧಿಯೂ ಕಡಿಮೆ: ಆತಂಕ ಮೂಡಿಸಿರುವ ಮತ್ತೊಂದು ಬೆಳವಣಿಗೆ ಎಂದರೆ ಪ್ರಕರಣಗಳು ದುಪ್ಪಟ್ಟು ಆಗುತ್ತಿರುವ ಅವಧಿ ಕಡಿಮೆ ಆಗಿರುವುದು. ದುಪ್ಪಟ್ಟು ಆಗುವ ಅವಧಿಯು ಮಾರ್ಚ್‌ 1ರಲ್ಲಿ 504 ದಿನಗಳಾಗಿತ್ತು. ಆದರೆ, ಇದು ಮಾರ್ಚ್‌ 31ರಲ್ಲಿ 139 ದಿನಗಳಿಗೆ ಇಳಿದಿದ್ದರೆ, ಏಪ್ರಿಲ್ 4ರ ವೇಳೆಗೆ 115 ದಿನಗಳಿಗೆ ಇಳಿದಿದೆ.

ಕೋವಿಡ್‌ನಿಂದ ಸಾವು ಕುಗ್ಗಿಸಲು ಆರೋಗ್ಯ ಆರೈಕೆ ಸೌಲಭ್ಯವನ್ನು ಉತ್ತಮಪಡಿಸಬೇಕು. ಆಮ್ಲಜನಕ ಮತ್ತು ವೆಂಟಿಲೇಟರ್‌ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಸೋಂಕು ಪೀಡಿತರ ಆರೈಕೆಗೆ ಮಾರ್ಗಸೂಚಿ ನಿಯಮಗಳನ್ನು ಆಸ್ಪತ್ರೆಗಳು ಮತ್ತು ಮನೆಗಳಲ್ಲಿ ಪಾಲಿಸಲಾಗುತ್ತಿದೆ ಎಂದು ಖಾತರಿಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಸಭೆಯಲ್ಲಿ ಸಲಹೆ ಮಾಡಿದರು.

ಕೋವಿಡ್ ತಡೆಗೆ ಅರಿವು ಮೂಡಿಸುವ ಕ್ರಮವಾಗಿ ಮಾಸ್ಕ್ ಧರಿಸುವುದನ್ನು ಶೇ 100ರಷ್ಟು ಜಾರಿಗೊಳಿಸುವುದು, ವ್ಯಕ್ತಿಗತವಾಗಿ ಶುಚಿತ್ವಕ್ಕೆ ಒತ್ತು ನೀಡುವುದು ಮತ್ತು ಸಾರ್ವಜನಿಕ ಸ್ಥಳಗಳ ಸ್ಯಾನಿಟೈಸೇಷನ್‌ ಮಾಡುವುದರ ಕುರಿಂತೆ ವಿಶೇಷ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬುಧವಾರ (ಏಪ್ರಿಲ್‌ 7) ಚಾಲನೆ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.