ADVERTISEMENT

ಸೇನೆ ಹೆಸರೆತ್ತಿ ಮತ ಕೇಳಿದ ಮಾತು ಮುಳುವಾಗುವುದೇ ಮೋದಿಗೆ?

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 2:34 IST
Last Updated 10 ಏಪ್ರಿಲ್ 2019, 2:34 IST
   

ನವದೆಹಲಿ: ಭಾರತೀಯ ಸೇನೆ ವಿಚಾರಗಳನ್ನು ಚುನಾವಣೆಗೆ ಬಳಸಿಕೊಳ್ಳುವುಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟವಾಗಿ ಹೇಳಿದೆ. ಆದರೂ, ಮಂಗಳವಾರ ಮಹಾರಾಷ್ಟ್ರದಲ್ಲಿ ಮೋದಿ ಅವರು ಅದೇ ವಿಚಾರಗಳ ಆಧಾರದ ಮೇಲೆ ಬಹಿರಂಗವಾಗಿ ಮತಯಾಚನೆ ಮಾಡಿದ್ದು ಸದ್ಯ ಕೇಂದ್ರ ಚುನಾವಣೆ ಆಯೋಗವು ಈ ಬಗ್ಗೆ ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿಯಿಂದ ವರದಿ ಕೇಳಿದೆ.

ಮಂಗಳವಾರ ಮಹಾರಾಷ್ಟ್ರದ ಲಾಥೂರ್‌ನ ಸಮಾವೇಶದಲ್ಲಿ ಮಾತನಾಡುತ್ತಿದ್ದ ಮೋದಿ, ‘ದೇಶದಲ್ಲಿ ಮೊದಲ ಬಾರಿಗೆ ಹಕ್ಕು ಚಲಾವಣೆ ಮಾಡುತ್ತಿರುವವರು ಬಾಳಾಕೋಟ್‌ ದಾಳಿ ಮಾಡಿದ ಸೈನಿಕರಿಗೆ ಮತವನ್ನು ಮೀಸಲಿಡಿ. ಮೊದಲ ಬಾರಿಗೆ ಮತ ಚಲಾವಣೆ ಮಾಡುತ್ತಿರುವವರು ಪುಲ್ವಾಮಾ ದಾಳಿಯಲ್ಲಿ ಮಡಿದವರಿಗಾಗಿ ಮತವನ್ನು ಮೀಸಲಿಡಿ,’ ಎಂದು ಹೇಳಿದ್ದರು.

ಮೋದಿ ಅವರ ಈ ಭಾಷಣವನ್ನು ಸೂಕ್ಷ್ಮವಾಗಿ ಗಮನಿಸಿರುವ ಕೇಂದ್ರದ ಚುನಾವಣಾ ಆಯೋಗವು, ಭಾಷಣದ ಬಗ್ಗೆ ಮಾಹಿತಿ ಪೂರೈಸುವಂತೆ ಮಹಾರಾಷ್ಟ್ರದ ಮುಖ್ಯ ಚುನಾವಣಾ ಆಧಿಕಾರಿಗೆ ಸೂಚನೆ ನೀಡಿದೆಎಂದು ಹೇಳಲಾಗಿದೆ.

ADVERTISEMENT

ಪುಲ್ವಾಮಾ ದಾಳಿ, ನಂತರದ ಬಾಳಾಕೋಟ್‌ ದಾಳಿ ಮತ್ತು ಅಭಿನಂದನ್‌ ವರ್ದಮಾನ್‌ ಅವರ ವಿಚಾರಗಳನ್ನು ಬಿಜೆಪಿ ಚುನಾವಣಾ ವಿಷಯವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಈ ಹಿಂದೆ ವಿರೋಧ ಪಕ್ಷಗಳು ಚುನಾವಣೆ ಆಯೋಗಕ್ಕೆ ದೂರು ನೀಡಿದ್ದವು. ಹೀಗಾಗಿ ಸೇನೆಯ ವಿಚಾರವನ್ನು ಚುನಾವಣೆಗೆ ಎಳೆದು ತಾರದಂತೆ ಚುನಾವಣೆ ಆಯೋಗ ಸೂಚನೆ ನೀಡಿತ್ತು.

ಇನ್ನು ಮಂಗಳವಾರವಷ್ಟೇ ಚುನಾವಣೆ ಆಯೋಗದ ಕಾರ್ಯವೈಖರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಕಾಂಗ್ರೆಸ್‌, ‘ ನೀತಿ ಸಂಹಿತೆ ಉಲ್ಲಂಘನೆಯ ವಿಷಯವಾಗಿ ನಾವೆಷ್ಟೇ ದೂರುಗಳನ್ನು ನೀಡಿದರೂ ಆಯೋಗ ಅವುಗಳನ್ನು ಪರಿಗಣಿಸುತ್ತಿಲ್ಲ. ನಿರ್ಲಕ್ಷ್ಯ ತೋರುತ್ತಿದೆ,’ ಎಂದು ಅಸಮಾಧಾನ ಹೊರ ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.