ADVERTISEMENT

ವಿರೋಧ ಪಕ್ಷಗಳ ನಾಯಕರ ಮೇಲೆ ಮಹಾರಾಷ್ಟ್ರ ಸರ್ಕಾರದ ಬೇಹುಗಾರಿಕೆ: ಕಾಂಗ್ರೆಸ್ ನಾಯಕ

ಮೃತ್ಯುಂಜಯ ಬೋಸ್
Published 31 ಅಕ್ಟೋಬರ್ 2025, 16:03 IST
Last Updated 31 ಅಕ್ಟೋಬರ್ 2025, 16:03 IST
<div class="paragraphs"><p>ಮಹಾರಾಷ್ಟ್ರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಹರ್ಷವರ್ಧನ್‌ ಸಪ್ಕಾಲ್‌ ಹಾಗೂ&nbsp;ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌</p></div>

ಮಹಾರಾಷ್ಟ್ರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಹರ್ಷವರ್ಧನ್‌ ಸಪ್ಕಾಲ್‌ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌

   

ಕೃಪೆ: X/@INCHarshsapkal, ಪಿಟಿಐ

ಮುಂಬೈ: ಸರ್ಕಾರವು ತಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿರುವ ಮಹಾರಾಷ್ಟ್ರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಹರ್ಷವರ್ಧನ್‌ ಸಪ್ಕಾಲ್‌, ಪೊಲೀಸರು ತಮ್ಮ ಮೇಲೆ ಕಣ್ಣಿಟ್ಟಿದ್ದಾರೆ ಎಂದು ದೂರಿದ್ದಾರೆ.

ADVERTISEMENT

ಬುಲ್ಧಾನಾ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಸಪ್ಕಾಲ್‌, ಮುಂಬೈನ ನಾನಾ ಚೌಕ್‌ನಲ್ಲಿರುವ ಸರ್ವೋದಯ ಆಶ್ರಯದಲ್ಲಿ ಉಳಿದುಕೊಂಡಿದ್ದಾರೆ.

ಮುಂಬೈನಲ್ಲಿರುವ ಮಹಾರಾಷ್ಟ್ರ ಕಾಂಗ್ರೆಸ್‌ ಕಚೇರಿ 'ತಿಲಕ್‌ ಭವನ'ದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

'ಇಂದು ಬೆಳಿಗ್ಗೆ, ಸಾಮಾನ್ಯ ಉಡುಪಿನಲ್ಲಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ಕಣ್ಗಾವಲು ಹಾಗೂ ವಿಚಾರಣೆ ಸಲುವಾಗಿ, ನಾನು ಮಲಗುವ ಕೋಣೆಗೆ ನೇರವಾಗಿ ಪ್ರವೇಶಿಸಿದರು. ತಪಾಸಣೆ ನೆಪದಲ್ಲಿ ನನ್ನನ್ನು ಪ್ರಶ್ನಿಸಲಾರಂಭಿಸಿದರು. ಪತ್ರಿಕಾಗೋಷ್ಠಿ ನಡೆಸಲು ಹೋಗುತ್ತೀರಾ ಅಥವಾ ಮಾಧ್ಯಮದವರು ಬರುತ್ತಾರಾ ಎಂದೆಲ್ಲಾ ಕೇಳಿದರು' ಎಂದಿದ್ದಾರೆ.

'ನೀವು, ನನ್ನ ಕೋಣೆಗೆ ಬಂದಿರುವುದೇಕೆ?, ಯಾರು ನಿಮಗೆ ಆದೇಶ ಮಾಡಿದ್ದಾರೆ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು, ಹಿರಿಯ ಅಧಿಕಾರಿಗಳ ಆದೇಶವಿದೆ ಎಂದರು. ಈ ರೀತಿ ಆಗುತ್ತಿರುವುದು ಮೂರನೇ ಬಾರಿ. ಯಾರ ಆದೇಶದ ಅನುಸಾರ ನನ್ನ ಮೇಲೆ ನಿಗಾ ಇಡಲಾಗುತ್ತಿದೆ' ಎಂದು ಸಪ್ಕಾಲ್‌ ಪ್ರಶ್ನಿಸಿದ್ದಾರೆ.

ತಮ್ಮ ಮೇಲಷ್ಟೇ ಅಲ್ಲ, ವಿರೋಧ ಪಕ್ಷಗಳ ಹಲವು ನಾಯಕರ ಮೇಲೂ ಇದೇ ರೀತಿ ಬೇಹುಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

'ಗೃಹ ಸಚಿವರೂ ಆಗಿರುವ ದೇವೇಂದ್ರ ಫಡಣವೀಸ್‌ ಅವರ ಆದೇಶದಂತೆ ಇದೆಲ್ಲವೂ ನಡೆಯುತ್ತಿದೆಯೇ? ಇದು, ವಿರೋಧಿಗಳ ಮೇಲೆ ಕಣ್ಣಿಡುವ ಬಿಜೆಪಿಯ ಪ್ರವೃತ್ತಿಯಾಗಿದೆ. ಮೊದಲು ಪೆಗಾಸಸ್‌, ನಂತರ ಫೋನ್‌ ಕದ್ದಾಲಿಕೆ ಮಾಡಿದ ಅವರು, ಇದೀಗ ಮಲಗುವ ಕೋಣೆವರೆಗೂ ತಲುಪಿದ್ದಾರೆ. ಇಂತಹ ಬೆದರಿಕೆಗಳಿಗೆಲ್ಲ ನಾವು ಮಣಿಯುವುದಿಲ್ಲ' ಎಂದು ಹೇಳಿದ್ದಾರೆ.