ADVERTISEMENT

ಹರಿಯಾಣ: ಬಿಜೆಪಿ ಸಭೆ ವಿರುದ್ಧ ಧರಣಿಗೆ ಮುಂದಾಗಿದ್ದ ರೈತರ ಮೇಲೆ ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 12:27 IST
Last Updated 28 ಆಗಸ್ಟ್ 2021, 12:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ: ಹರಿಯಾಣದಲ್ಲಿ ಬಿಜೆಪಿ ಸಭೆಯ ವಿರುದ್ಧ ಪ್ರತಿಭಟಿಸಲು ಕರ್ನಾಲ್ ಕಡೆಗೆ ಹೊರಟಿದ್ದರೈತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಚ್‌ನಲ್ಲಿ 10 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ರೈತರ ಗುಂಪಿನ ಮೇಲೆ ಪೊಲೀಸ್ ಲಾಠಿ ಪ್ರಹಾರ ಮಾಡಿದ್ದಾರೆ. ಸಭೆಯಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಜೊತೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಓಂ ಪ್ರಕಾಶ್ ಧನಕರ್ ಮತ್ತು ಇತರ ಮುಖಂಡರು ಹಾಜರಿದ್ದರು.

ರೈತರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಹರಿಯಾಣ ಪೊಲೀಸ್ ತೀವ್ರ ಟೀಕೆಗೆ ಗುರಿಯಾಗಿದೆ. ಹಲವಾರು ಕಡೆ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಯಿತು.

ಫತೇಹಾಬಾದ್-ಚಂಡೀಗಡ, ಗೊಹಾನ-ಪಾಣಿಪತ್, ಜಿಂದ್-ಪಟಿಯಾಲ ಹೆದ್ದಾರಿ, ಅಂಬಾಲಾ-ಚಂಡೀಗಡ ಮತ್ತು ಹಿಸಾರ್-ಚಂಡೀಗಡ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಮೊಟಕುಗೊಂಡಿದೆ.

'ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ವಿನಾಕಾರಣ ಲಾಠಿಚಾರ್ಜ್ ಮಾಡಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ' ಎಂದು ಹರಿಯಾಣ ಭಾರತೀಯ ಕಿಸಾನ್ ಸಂಘದ (ಚದುನಿ) ಅಧ್ಯಕ್ಷ ಗುರ್ನಾಮ್ ಸಿಂಗ್ ಹೇಳಿದ್ದಾರೆ.

ಕರ್ನಾಲ್‌ನಿಂದ 15 ಕಿ.ಮೀ. ದೂರದಲ್ಲಿರುವ ಬಸ್ತಾರಾ ಟೋಲ್ ಪ್ಲಾಜಾದಲ್ಲಿ ಹಲವಾರು ಪ್ರತಿಭಟನಾಕಾರರು ಜಮಾಯಿಸಿದ್ದರು.

ಪ್ರದೇಶದಲ್ಲಿ ಸೆಕ್ಷನ್ 144 ಹೇರಲಾಗಿತ್ತು. ಪ್ರತಿಭಟನಾಕಾರರು ಹೆದ್ದಾರಿಯನ್ನು ತಡೆ ನಡೆಸಿದ್ದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಇದನ್ನು ನಿಯಂತ್ರಿಸಲು ಪೊಲೀಸ್ ಪಡೆಯನ್ನು ಬಳಕೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.