ADVERTISEMENT

ಪಂಜಾಬ್ ಸಿಎಂ ಅಮರಿಂದರ್ ಪ್ರಧಾನ ಸಲಹೆಗಾರ ಸ್ಥಾನಕ್ಕೆ ಪ್ರಶಾಂತ್ ಕಿಶೋರ್ ರಾಜೀನಾಮೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಆಗಸ್ಟ್ 2021, 6:23 IST
Last Updated 5 ಆಗಸ್ಟ್ 2021, 6:23 IST
ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌
ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌   

ನವದೆಹಲಿ: ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರಿಗೆ ಪ್ರಧಾನ ಸಲಹೆಗಾರರಾಗಿದ್ದ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಈ ಬೆಳವಣಿಗೆ ನಡೆದಿದೆ.

ಸ್ಥಾನದಿಂದ ಬಿಡುಗಡೆ ಮಾಡುವಂತೆ ಸಿಎಂ ಅಮರಿಂದರ್‌ ಅವರಿಗೆ ಕಿಶೋರ್‌ ಮನವಿ ಮಾಡಿದ್ದಾರೆ. 'ಸಾರ್ವಜನಿಕ ಜೀವನದಿಂದ ತಾತ್ಕಾಲಿಕ ಬಿಡುವು ಪಡೆಯುವ ನಿರ್ಧಾರಕ್ಕೆ ಬಂದಿರುವುದರಿಂದ ನಿಮ್ಮ ಪ್ರಧಾನ ಸಲಹೆಗಾರನಾಗಿ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹೊಣೆಯಿಂದ ನನಗೆ ಬಿಡುಗಡೆ ನೀಡಬೇಕೆಂದು ಕೋರುತ್ತೇನೆ' ಎಂದು ಕಿಶೋರ್‌ ತಿಳಿಸಿರುವುದಾಗಿ ಎಎನ್‌ಐ ಸುದ್ದಿ ಮಾಧ್ಯಮ ವರದಿ ಮಾಡಿದೆ.

ಇದೇ ವರ್ಷ ಮಾರ್ಚ್‌ನಲ್ಲಿ ಅಮರಿಂದರ್‌ ಅವರ ಪ್ರಧಾನ ಸಲಹೆಗಾರರಾಗಿ ಪ್ರಶಾಂತ್‌ ಕಿಶೋರ್‌ ಜವಾಬ್ದಾರಿ ವಹಿಸಿದ್ದರು. 'ನನ್ನ ಪ್ರಧಾನ ಸಲಹೆಗಾರರಾಗಿ ಪ್ರಶಾಂತ್‌ ಕಿಶೋರ್‌ ನೇಮಕಗೊಂಡಿರುವುದು ಸಂತಸ ತಂದಿದೆ. ಪಂಜಾಬ್‌ ಜನರ ಉನ್ನತಿಗಾಗಿ ಒಟ್ಟಿಗೆ ಕಾರ್ಯಾಚರಿಸಲು ಎದುರು ನೋಡುತ್ತಿದ್ದೇನೆ' ಎಂದು ಅಮರಿಂದರ್‌ ಸಿಂಗ್‌ ಈ ಹಿಂದೆ ಟ್ವೀಟಿಸಿದ್ದರು.

ADVERTISEMENT

ಪ್ರಶಾಂತ್‌ ಕಿಶೋರ್‌ ಅವರಿಗೆ ಪಂಜಾಬ್‌ನ ಸಂಪುಟ ದರ್ಜೆ ಸಚಿವರ ಸ್ಥಾನವನ್ನು ನೀಡಲಾಗಿತ್ತು.

ಪ್ರಶಾಂತ್‌ ಕಿಶೋರ್‌ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಕುರಿತು ಕಳೆದ ತಿಂಗಳಿಂದ ಊಹಾಪೋಹ ಸೃಷ್ಟಿಯಾಗಿದೆ. ಅದಕ್ಕೆ ಪುಷ್ಠಿ ನೀಡುವಂತೆ ಕಿಶೋರ್‌, ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಸಹ ಭೇಟಿ ಮಾಡಿದ್ದರು.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಬಳಿಕ ಚುನಾವಣಾ ಕಾರ್ಯತಂತ್ರದಿಂದ ಹೊರಗುಳಿಯುವುದಾಗಿ ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.