ADVERTISEMENT

ಶ್ರದ್ಧಾಗೆ ಅಫ್ತಾಬ್‌ ಥಳಿಸುತ್ತಿದ್ದ: ಕೋರ್ಟ್‌ಗೆ ಹೇಳಿಕೆ ನೀಡಿದ ಶ್ರೀಜಯ್‌

ಪಿಟಿಐ
Published 2 ಜೂನ್ 2023, 0:25 IST
Last Updated 2 ಜೂನ್ 2023, 0:25 IST
.
.   

ನವದೆಹಲಿ: ‘ಅಫ್ತಾಬ್ ಅಮೀನ್ ಪೂನಾವಾಲಾ ಶ್ರದ್ಧಾ ವಾಕರ್ ಅವರನ್ನು ಥಳಿಸಿ, ನಂತರ ಕ್ಷಮೆಯಾಚಿಸಿತ್ತಿದ್ದ ಹಾಗೂ ತಾನು ನಡೆಸಿದ ಹಲ್ಲೆಯನ್ನು ಕ್ಷಮಿಸುವಂತೆ ಮನವೊಲಿಸುತ್ತಿದ್ದ’ ಎಂದು ಶ್ರದ್ಧಾ ಅವರ ಸಹೋದರ ಶ್ರೀಜಯ್‌ ವಿಕಾಸ್‌ ವಾಲಕರ್‌ ಅವರು ದೆಹಲಿ ನ್ಯಾಯಾಲಯದಲ್ಲಿ ಗುರುವಾರ ಹೇಳಿಕೆ ನೀಡಿದ್ದಾರೆ.

ಶ್ರದ್ಧಾ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮನಿಷಾ ಖುರಾನಾ ಕಕ್ಕರ್ ಅವರ ಮುಂದೆ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಶ್ರೀಜಯ್ ವಿಕಾಸ್ ವಾಲಕರ್‌ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಈ ಮಾಹಿತಿ ಬಹಿರಂಗವಾಗಿದೆ.‌

‘ಅಫ್ತಾನ್‌ನೊಂದಿಗೆ ಸ್ನೇಹ ಮಾಡದಂತೆ ತಮ್ಮ ಕುಟುಂಬವು ಸಲಹೆ ನೀಡಿದ ಬಳಿಕ ಶ್ರದ್ಧಾ ಅವರು ಮುಂಬೈನ ತಮ್ಮ ಮನೆ ತೊರೆದಿದ್ದರು. 2018–2019ರಲ್ಲಿ ಶ್ರದ್ಧಾ ಅವರು ಕಾಲ್‌ ಸೆಂಟರ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಅಫ್ತಾಬ್‌ನಿಂದಿಗೆ ಸ್ನೇಹವೇರ್ಪಟ್ಟಿತ್ತು’ ಎಂದೂ ಅವರು ನ್ಯಾಯಾಲಯದಲ್ಲಿ ತಿಳಿಸಿದರು.

ADVERTISEMENT

‘ಶ್ರದ್ಧಾ ತಾನು ಅಫ್ತಾಬ್‌ನೊಂದಿಗೆ ಸಹಜೀವನ ಸಂಗಾತಿಯಾಗಿ ಇರುತ್ತೇನೆಂದು ಹೇಳಿದಾಗ ನಾವು ಆಕೆಯ ಮನವೊಲಿಸಲು ಬಹಲ ಪ್ರಯತ್ನಿಸಿದೆವು. ಆದರೆ ಆಕೆ ಆತನಿಂದ (ಅಫ್ತಾಬ್‌) ಪ್ರಭಾವಿತಳಾಗಿದ್ದಳು’ ಎಂದರು.

‘ಅಫ್ತಾಬ್‌ನೊಂದಿಗೆ ವಾಸಿಸಲು ಪ್ರಾರಂಭಿಸಿದ ಎರಡು ವಾರಗಳ ನಂತರ, ಅಫ್ತಾಬ್‌ ತನ್ನ ಜೊತೆ ಜಗಳವಾಡುತ್ತಿರುವುದಾಗಿ ಹಾಗೂ ತನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಿರುವುದಾಗಿ ಶ್ರದ್ಧಾ ನನಗೆ ತಿಳಿಸಿದಳು. ನಮ್ಮ ತಾಯಿ ನಿಧನರಾದ ನಂತರವೂ ಆಕೆಯ ಮನವೊಲಿಸಲು ಪ್ರಯತ್ನಿಸಿದರೂ ಆಕೆ ಅಫ್ತಾಬ್‌ನನ್ನು ಬಿಟ್ಟುಬರಲು ಒಪ್ಪಲಿಲ್ಲ’ ಎಂದರು.

ಅಫ್ತಾಬ್‌ ತನ್ನ ಸಹಜೀವನ ಸಂಗಾತಿ ಶ್ರದ್ಧಾ ವಾಲಕರ್‌ ಅವರನ್ನು ಕಳೆದ ವರ್ಷ ಮೇ 18ರಂದು ಬರ್ಬರವಾಗಿ ಹತ್ಯೆ ಮಾಡಿದ್ದ. ನಂತರ ದೇಹವನ್ನು ತುಂಡು ತುಂಡಾಗಿಸಿ ಬಿಸಾಡಿದ್ದ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.