ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ಜನ
–ಪಿಟಿಐ ಚಿತ್ರ
ಪೂಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ರಾಜೌರಿ ಜಿಲ್ಲೆಗಳ ಮುಂಚೂಣಿ ಪ್ರದೇಶಗಳಲ್ಲಿ ಇಂದು (ಶುಕ್ರವಾರ) ಮುಂಜಾನೆ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಒರ್ವ ಮೃತಪಟ್ಟು, ಇತರ ಮೂವರು ಗಾಯಗೊಂಡಿದ್ದಾರೆ.
ಬೆಳಗಿನ ಜಾವ 3:50 ರಿಂದ 4:45 ರ ನಡುವೆ ತೀವ್ರವಾದ ಸ್ಫೋಟಗಳು ಸಂಭವಿಸಿವೆ. ತಕ್ಷಣ ವಿದ್ಯುತ್ ಕಡಿತಗೊಂಡು ಸೈರನ್‌ಗಳ ಸದ್ದು ಕೇಳಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರದ ಕುಪ್ವಾರಾ ಮತ್ತು ಬಾರಾಮುಲ್ಲಾ ಜಿಲ್ಲೆಗಳನ್ನು ಹೊರತುಪಡಿಸಿ, ರಾಜೌರಿ, ಪೂಂಚ್ ಮತ್ತು ಜಮ್ಮು ಜಿಲ್ಲೆಗಳ ಪ್ರದೇಶಗಳ ಮೇಲೆ ರಾತ್ರಿಯಿಡೀ ಗುಂಡಿನ ಮತ್ತು ಶೆಲ್ ದಾಳಿ ನಡೆಸಲಾಯಿತು. ಭಾರತೀಯ ಸೇನೆ ದಾಳಿಯನ್ನು ಹಿಮ್ಮೆಟ್ಟಿಸಿದೆ.
ಪೂಂಚ್ ಜಿಲ್ಲೆಯ ಲೋರನ್ ಮತ್ತು ಮೆಂಧರ್ ವಲಯಗಳ ವಿವಿಧ ಪ್ರದೇಶಗಳಲ್ಲಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಅವರ ಪತ್ನಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಲೋರಾನ್ ಪ್ರದೇಶದ ಮೊಹಮ್ಮದ್ ಅಬ್ರಾರ್ ಎಂದು ಗುರುತಿಸಲಾಗಿದೆ.
ಶೆಲ್ ದಾಳಿಯಿಂದ ಆಸ್ತಿಪಾಸ್ತಿಗೆ ವ್ಯಾಪಕ ಹಾನಿಯಾಗಿದೆ. ಅನೇಕ ಮನೆಗಳು ಮತ್ತು ನೂರಾರು ವಾಹನಗಳು ಹಾನಿಗೊಳಗಾಗಿವೆ ಎಂದು ಅವರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಕದನ ವಿರಾಮ ಉಲ್ಲಂಘಿಸಿ ಮಂಗಳವಾರ ರಾತ್ರಿ ಪಾಕಿಸ್ತಾನ ನಡೆಸಿರುವ ದಾಳಿಯಿಂದಾಗಿ ಪೂಂಛ್ ವಲಯದಲ್ಲಿ 15 ನಾಗರಿಕರು ಸಾವಿಗೀಡಾಗಿದ್ದು, 43 ಮಂದಿ ಗಾಯಗೊಂಡಿದ್ದಾರೆ ಎಂದು ಸೇನೆ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನ ಭಾರಿ ಶೆಲ್ ದಾಳಿ ನಡೆಸುತ್ತಿದೆ. ದಾಳಿಯಿಂದ ಬಾಧಿತವಾಗಿರುವ ಭಾರತ–ಪಾಕಿಸ್ತಾನ ಗಡಿ ಪ್ರದೇಶದಲ್ಲಿರುವ ಈ ಜಿಲ್ಲೆಯ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಗಳಿಂದ ನಾಗರಿಕರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಭಾರಿ ಪ್ರಮಾಣದ ಕಾರ್ಯಾಚರಣೆಗೆ ಅಧಿಕಾರಿಗಳು ಗುರುವಾರ ಚಾಲನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.