ADVERTISEMENT

ಮತದಾನೋತ್ತರ ಅಂಕಿ–ಅಂಶ ವರದಿ ರೂಪಿಸಲು ಹೊಸ ವ್ಯವಸ್ಥೆ: ಆಯೋಗ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 15:44 IST
Last Updated 5 ಜೂನ್ 2025, 15:44 IST
ಚುನಾವಣಾ ಆಯೋಗದ ಲಾಂಛನ
ಚುನಾವಣಾ ಆಯೋಗದ ಲಾಂಛನ   

ನವದೆಹಲಿ: ‘ಮತದಾನೋತ್ತರದಲ್ಲಿ ಚುನಾವಣಾ ಅಂಕಿ ಅಂಶ ಆಧಾರಿತ ವಿವಿಧ ಕೋಷ್ಟಕಗಳನ್ನು ವ್ಯವಸ್ಥಿತವಾಗಿ ಸಿದ್ಧಪಡಿಸಲು ಹೊಸ ಹಾಗೂ ಸುಧಾರಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ’ ಎಂದು ಚುನಾವಣಾ ಆಯೋಗವು ಗುರುವಾರ ತಿಳಿಸಿದೆ. 

ಈ ಹಿಂದೆ ಪಟ್ಟಿಗಳನ್ನು ಸಿಬ್ಬಂದಿಯೇ ಸಿದ್ಧಪಡಿಸುತ್ತಿದ್ದರು. ಹೆಚ್ಚು ಸಮಯ ತಗುಲುತ್ತಿದ್ದು, ಲೋಪಗಳಿಗೂ ಅವಕಾಶ ಇರುತ್ತಿತ್ತು. ಈಗ ಸ್ವಯಂಚಾಲಿತ ಅಂಕಿ–ಅಂಶ ವಿಶ್ಲೇಷಣೆಯಿಂದ ಕ್ಷಿಪ್ರಗತಿಯಲ್ಲಿ ಪಟ್ಟಿಗಳು ಸಿದ್ಧವಾಗಲಿದೆ ಎಂದು ಆಯೋಗವು ವಿವರಿಸಿದೆ.

ನೂತನ ವ್ಯವಸ್ಥೆಯು ಕಾಗದರಹಿತವಾಗಿದೆ. ಚುನಾವಣಾ ನಂತರ ಮಾಹಿತಿ ರವಾನೆಗೆ ಹೊಸ ಮಾದರಿ ಅಭಿವೃದ್ಧಿಪಡಿಸಲಾಗಿದೆ. ಕ್ಷೇತ್ರವಾರು ಹಂತದಲ್ಲಿ ಚುನಾವಣಾ ಸಂಬಂಧಿತ ಅಗತ್ಯ ಮಾಹಿತಿಯನ್ನು ತ್ವರಿತಗತಿಯಲ್ಲಿ ಪಡೆಯಲು ನೂತನ ವ್ಯವಸ್ಥೆ ಸಹಕಾರಿ ಆಗಲಿದೆ ಎಂದು ತಿಳಿಸಿದೆ.

ADVERTISEMENT

ಹೊಸ ವ್ಯವಸ್ಥೆಯಡಿ ಅಭ್ಯರ್ಥಿಗಳು, ಮತದಾರರು, ಚಲಾವಣೆಯಾದ ಮತ, ಮತಎಣಿಕೆ, ಪಕ್ಷ ಮತ್ತು ಅಭ್ಯರ್ಥಿವಾರು ಮತಗಳಿಕೆ ಪ್ರಮಾಣ, ಲಿಂಗಾಧಾರಿತ ಮತಹಕ್ಕು ಚಲಾವಣೆ ಮಾಹಿತಿ, ಪ್ರಾದೇಶಿಕವಾಗಿ ಇರುವ ವ್ಯತ್ಯಾಸ, ಪಕ್ಷಾವಾರು ಸಾಧನೆ ಕುರಿತ ಸೂಚ್ಯಂಕಗಳು ತ್ವರಿತವಾಗಿ ಸಿದ್ಧವಾಗಲಿವೆ. ಸುಧಾರಿತ ವ್ಯವಸ್ಥೆಯಡಿ ಲೋಕಸಭೆ ಕ್ಷೇತ್ರವಾರು ಅಂಕಿ ಅಂಶ ಆಧಾರಿತ 35 ವರದಿಗಳು, ವಿಧಾನಸಭಾ ಕ್ಷೇತ್ರವಾರು 14 ವರದಿಗಳು ಸಿದ್ಧವಾಗಲಿವೆ.

ಪ್ರಸ್ತುತ, ಇದುವರೆಗೂ ಈ ಪಟ್ಟಿಗಳನ್ನು ಸಿಬ್ಬಂದಿಯೇ ಕಾಗದಬಳಸಿ ಭೌತಿಕವಾಗಿ ಮಾಡುತ್ತಿದ್ದರು. ನಂತರ ಈ ಮಾಹಿತಿಗಳನ್ನು ಆನ್‌ಲೈನ್‌ ವ್ಯವಸ್ಥೆಗೆ ಅಪ್‌ಲೋಡ್‌ ಮಾಡಲಾಗುತ್ತಿತ್ತು. ಈಪ್ರಕ್ರಿಯೆಯಲ್ಲಿ ವರದಿ ಸಿದ್ಧವಾಗುವುದು ತೀರಾ ವಿಳಂಬವಾಗುತ್ತಿತ್ತು ಎಂದು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.