ಸೋನಿಯಾ ಗಾಂಧಿ
ನವದೆಹಲಿ: ಸೆಪ್ಟೆಂಬರ್ 18 ರಿಂದ ನಡೆಯಲಿರುವ ಸಂಸತ್‌ನ ವಿಶೇಷ ಅಧಿವೇಶನಕ್ಕೆ ಯಾವುದೇ ಕಾರ್ಯಸೂಚಿ ನೀಡಿಲ್ಲ ಎಂದು ಆಕ್ಷೇಪಿಸಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ. ಐದು ದಿನಗಳ ಅಧಿವೇಶನದಲ್ಲಿ ಮಣಿಪುರ ಗಲಭೆ, ಜಾತಿ ಗಣತಿ, ಬೆಲೆ ಏರಿಕೆ, ಅದಾನಿ ಸಮೂಹದ ವಿರುದ್ಧದ ಆರೋಪಗಳು ಸೇರಿದಂತೆ ಒಂಬತ್ತು ವಿಷಯಗಳ ಕುರಿತು ಚರ್ಚೆ ನಡೆಸಬೇಕು ಎಂದೂ ಒತ್ತಾಯಿಸಿದ್ದಾರೆ.
ಈ ಪತ್ರಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋನಿಯಾ ಅವರಿಗೆ ಪತ್ರ ಬರೆದಿರುವ ಅವರು, ‘ಯಾವುದೇ ವಿಷಯದ ಬಗ್ಗೆ ಚರ್ಚಿಸಲು ನಮ್ಮ ಸರ್ಕಾರ ಸಿದ್ಧವಿದೆ’ ಎಂದೂ ಹೇಳಿದ್ದಾರೆ.
ಎರಡು ಪುಟಗಳ ಪತ್ರದಲ್ಲಿ ಸೋನಿಯಾ, ‘ಅಧಿವೇಶನದಲ್ಲಿ ಭಾಗವಹಿಸಲು ಖಂಡಿತವಾಗಿ ಬಯಸುತ್ತಿದ್ದೇವೆ. ಏಕೆಂದರೆ ಇದು ಸಾರ್ವಜನಿಕ ಕಾಳಜಿ ಮತ್ತು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶ ನೀಡುತ್ತದೆ. ಸೂಕ್ತವಾದ ನಿಯಮದಡಿಯಲ್ಲಿ ಒಂಬತ್ತು ವಿಷಯಗಳ ಚರ್ಚೆಗೆ ಸಮಯ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ರಾಜಕೀಯ ಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಈ ವಿಶೇಷ ಅಧಿವೇಶನ ಕರೆಯಲಾಗಿದೆ. ನಮ್ಮಲ್ಲಿ ಯಾರಿಗೂ ಅಧಿವೇಶನದ ಕಾರ್ಯಸೂಚಿಯ ಬಗ್ಗೆ ಯಾವುದೇ ಕಲ್ಪನೆ ಇಲ್ಲ. ಎಲ್ಲಾ ಐದು ದಿನಗಳನ್ನು ಸರ್ಕಾರಿ ವ್ಯವಹಾರಕ್ಕೆ ಮೀಸಲಿಡಲಾಗಿದೆ ಎಂಬುದಾಗಿ ತಿಳಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.
ಈ ಪತ್ರವನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, ‘ಕಾರ್ಯಸೂಚಿ ಬಗ್ಗೆ ಚರ್ಚಿಸದೆ ಅಥವಾ ಪ್ರಚಾರ ಮಾಡದೆ ವಿಶೇಷ ಅಧಿವೇಶನ ಕರೆಯುತ್ತಿರುವುದು ಇದೇ ಮೊದಲು’ ಎಂದರು.
ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ, ಅಸಮಾನತೆ ಹೆಚ್ಚಳ ಮತ್ತು ಸಣ್ಣ ಕೈಗಾರಿಕಾ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟಿನ ಕೇಂದ್ರೀಕರಿಸಿ ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಬೇಕು ಎಂದು ಸೋನಿಯಾ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಅದಾನಿ ಸಮೂಹದ ವಹಿವಾಟಿನ ಬಗ್ಗೆ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ತನಿಖೆ ನಡೆಸಬೇಕು. ಮಣಿಪುರದ ಜನರು ಎದುರಿಸುತ್ತಿರುವ ನಿರಂತರ ಸಂಕಟದ ಬಗ್ಗೆ ಚರ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
‘ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಿರಿಯ ಸಂಸದರಾಗಿದ್ದರೂ ಮುಂಬರುವ ಸಂಸತ್ತಿನ ಅಧಿವೇಶನಕ್ಕೆ ಸಂಬಂಧಿಸಿದಂತೆ ಅನಗತ್ಯ ವಿವಾದ ಸೃಷ್ಟಿಸಲು ಯತ್ನಿಸುತ್ತಿರುವುದು ದುರದೃಷ್ಟಕರ. ಸಂಸತ್ತಿನ ಅಧಿವೇಶನವನ್ನು ಕರೆಯುವುದು ಭಾರತ ಸರ್ಕಾರದ ಸಾಂವಿಧಾನಿಕ ಹಕ್ಕು. ಸಂಸತ್ತಿನ ಘನತೆ ಕಾಪಾಡಲು ಎಲ್ಲ ಪಕ್ಷಗಳು ಸಂಪೂರ್ಣ ಸಹಕಾರ ನೀಡುತ್ತವೆ ಎಂದು ಭಾವಿಸುತ್ತೇನೆ’ ಎಂದು ಜೋಶಿ ಪತ್ರದಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.