ADVERTISEMENT

ಆಪದ್ಬಾಂಧವ ಪ್ರಣವ್ ಮುಖರ್ಜಿ ಸೋಲಿಗೂ ಕಾರಣ

ಶೆಮಿಜ್‌ ಜಾಯ್‌
Published 31 ಆಗಸ್ಟ್ 2020, 18:47 IST
Last Updated 31 ಆಗಸ್ಟ್ 2020, 18:47 IST
ಪ್ರಣವ್ ಮುಖರ್ಜಿ
ಪ್ರಣವ್ ಮುಖರ್ಜಿ   

ನವದೆಹಲಿ: ಪ್ರಣವ್‌ ಅವರು ಸುಮಾರು ನಾಲ್ಕು ದಶಕಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹಲವು ಬಿಕ್ಕಟ್ಟುಗಳಿಂದ ಪಾರು ಮಾಡಿದ್ದಾರೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ನ ಅವನತಿಗೆ ಪ್ರಣವ್‌ ಅವರೂ ಕಾರಣ. 1967ರ ವಿಧಾನಸಭಾ ಚುನಾವಣೆಯಲ್ಲಿ ‘ಬಾಂಗ್ಲಾ ಕಾಂಗ್ರೆಸ್‌’ ಪಕ್ಷವು ಕಾಂಗ್ರೆಸ್‌ನ ಸೋಲಿಗೆ ಕಾರಣವಾಯಿತು. ಸ್ವಾತಂತ್ರ್ಯ ಬಳಿಕ ನಿರಂತರವಾಗಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಅಧಿಕಾರದಿಂದ ಕೆಳಗೆ ಇಳಿಯಿತು.

1960ರ ದಶಕದ ಮಧ್ಯ ಭಾಗದಲ್ಲಿ ಪ್ರಣವ್‌ ಅವರು ರಾಜಕಾರಣ ಪ್ರವೇಶಿಸಿದರು. ಕಾಂಗ್ರೆಸ್‌ನ ಪಶ್ಚಿಮ ಬಂಗಾಳ ಘಟಕವು 1950ರ ದಶಕದಲ್ಲಿಯೇ ಒಡೆದ ಮನೆಯಾಗಿತ್ತು. ಹಿರಿಯ ಮುಖಂಡರಾದ ಅತುಲ್ಯ ಘೋಷ್‌ ಮತ್ತು ಪ್ರಫುಲ್ಲಚಂದ್ರ ಸೇನ್‌ ಅವರು ಒಂದೆಡೆಯಿದ್ದರೆ ಅರುಣ್‌ ಕುಮಾರ್‌ ಗುಹಾ, ಸುರೇಂದ್ರ ಮೋಹನ್‌ ಇನ್ನೊಂದೆಡೆ ಇದ್ದರು. 1966ರಲ್ಲಿ ಕಾಂಗ್ರೆಸ್‌ ಮತ್ತೆ ವಿಭಜನೆಯಾಯಿತು. ಅಜಯ್‌ ಮುಖರ್ಜಿ ಅವರು ಬಾಂಗ್ಲಾ ಕಾಂಗ್ರೆಸ್‌ ಸ್ಥಾಪಿಸಿದರು. ಪ್ರಣವ್‌ ಈ ಪಕ್ಷ ಸೇರುವುದರೊಂದಿಗೆ ಸಕ್ರಿಯ ರಾಜಕಾರಣ ಆರಂಭಿಸಿದರು.

ಘೋಷ್‌ ಅವರ ಗುಂಪು 1966ರ ಫೆಬ್ರುವರಿಯಲ್ಲಿ ನಡೆಸಿದ ಸಭೆಯಲ್ಲಿ ಪ್ರಣವ್‌ ಭಾಗಿಯಾಗಿದ್ದರು. ಮೇ ತಿಂಗಳಲ್ಲಿ ಕಾಂಗ್ರೆಸ್‌ ಒಡೆಯಿತು. ಘೋಷ್‌ ಅವರು ನಡೆಸಿದ ರಾಜ್ಯ ಯಾತ್ರೆಯಲ್ಲಿ ಪ್ರಣವ್‌ ಅವರೂ ಇದ್ದರು. ಕಾಂಗ್ರೆಸ್ ವಿರುದ್ಧ ಎಲ್ಲ ವಿರೋಧ ಪಕ್ಷಗಳ ಒಗ್ಗಟ್ಟು ಬೇಕು ಎಂಬ ಪ್ರಸ್ತಾವ ಮುಂದಿಟ್ಟದ್ದರು ಕೂಡ ಪ್ರಣವ್‌ ಅವರೇ. ಘೋಷ್‌ ಅವರು ಸಂಯುಕ್ತ ರಂಗದ ಮಾತುಕತೆ ಆರಂಭಿಸಿದರು. ಮತ್ತಿನದೆಲ್ಲವೂ ಇತಿಹಾಸ. ಸಂಯುಕ್ತ ರಂಗವು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿತು. ಕಾಂಗ್ರೆಸ್‌ನೊಳಗಿನ ಬಿರುಕು ಮತ್ತು ರಾಜ್ಯದಲ್ಲಿ ಹದಗೊಳ್ಳುತ್ತಿದ್ದ ಕಾಂಗ್ರೆಸ್‌ ವಿರೋಧಿ ಮನೋಭಾವವನ್ನು ಪ್ರಣವ್‌ ಸರಿಯಾಗಿಯೇ ಗ್ರಹಿಸಿದ್ದರು.

ADVERTISEMENT

ಕಾಂಗ್ರೆಸೇತರ ಎಲ್ಲ ಪಕ್ಷಗಳನ್ನು ಒಟ್ಟುಗೂಡಿಸಲು ಘೋಷ್‌ ಅವರಿಗೆ ಸಾಧ್ಯ ಆಗಿರಲಿಲ್ಲ. ಸಿಪಿಐ ಮತ್ತು ಆರ್‌ಎಸ್‌ಪಿಯನ್ನು ಜತೆಗೆ ಸೇರಿಸಿಕೊಳ್ಳುವುದು ಸಾಧ್ಯ ಆಗಿತ್ತು. ಸಿಪಿಎಂ ನೇತೃತ್ವದ ಇನ್ನೊಂದು ಗುಂಪಿನಲ್ಲಿ ಉಳಿದ ಪಕ್ಷಗಳಿದ್ದವು. ಚುನಾವಣೆಯಲ್ಲಿ ಯಾವ ಗುಂಪಿಗೂ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಹಾಗಾಗಿ, ಬಾಂಗ್ಲಾ ಕಾಂಗ್ರೆಸ್‌ ಮತ್ತು ಸಿಪಿಎಂ ಜತೆಗೂಡಿ ಸರ್ಕಾರ ರಚಿಸಿದವು. ಘೋಷ್‌ ಮುಖ್ಯಮಂತ್ರಿ ಮತ್ತು ಜ್ಯೋತಿ ಬಸು ಉಪಮುಖ್ಯಮಂತ್ರಿ ಆಗಿದ್ದರು.

ಘೋಷ್‌ ಅವರ ನಿಕಟವರ್ತಿಯಾಗಿದ್ದ ಮುಖರ್ಜಿ, ಮೈತ್ರಿಕೂಟ ಕಟ್ಟಲು ತೆರೆಮರೆಯಲ್ಲಿ ದುಡಿದಿದ್ದರು. ಮೈತ್ರಿಕೂಟದ ಸರ್ಕಾರವು ಬಹಳ ಕಾಲ ಬಾಳಲಿಲ್ಲ. ಬಾಂಗ್ಲಾ ಕಾಂಗ್ರೆಸ್‌ ವಿಭಜನೆ ಆಗುವುದರೊಂದಿಗೆ ಸರ್ಕಾರವನ್ನು ರಾಜ್ಯಪಾಲರು ವಜಾ ಮಾಡಿದ್ದರು.

ಮೈತ್ರಿಕೂಟ ರಾಜಕಾರಣದ ಜತೆಗೆ ಪ್ರಣವ್‌ ಅವರಿಗೆ ಇದು ಮೊದಲ ಮುಖಾಮುಖಿ. ಮುಂದೆ, ಕಾಂಗ್ರೆಸ್‌ಗಾಗಿ ಮೈತ್ರಿಕೂಟ ನಿರ್ವಹಣೆಗೆ ಈ ಅನುಭವ ಕೊಟ್ಟ ಕೊಡುಗೆ ಬಹಳ ದೊಡ್ಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.