ADVERTISEMENT

2024ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಪರ ಪ್ರಶಾಂತ್ ಕಿಶೋರ್ 'ರಣತಂತ್ರ'

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 11:39 IST
Last Updated 16 ಏಪ್ರಿಲ್ 2022, 11:39 IST
ಪ್ರಶಾಂತ್‌ ಕಿಶೋರ್‌
ಪ್ರಶಾಂತ್‌ ಕಿಶೋರ್‌   

ನವದೆಹಲಿ: ಚುನಾವಣಾ ಕಾರ್ಯತಂತ್ರಗಾರ ಪ್ರಶಾಂತ್‌ ಕಿಶೋರ್‌ ಅವರು ಶನಿವಾರ 2024ರ ಚುನಾವಣೆಯ ವಿವರವಾದ ಕಾರ್ಯಸೂಚಿಯನ್ನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಉನ್ನತ ನಾಯಕರ ಮುಂದಿಟ್ಟರು.

ಕಾರ್ಯಸೂಚಿ ಪ್ರಸ್ತುತಪಡಿಸಿದ ನಂತರ, ಸೋನಿಯಾ ಗಾಂಧಿ ಅವರು ಈ ಸಲಹೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿದರು.

'ಪ್ರಶಾಂತ್ ಕಿಶೋರ್ ಅವರು 2024ರ ಚುನಾವಣೆಗೆ ವಿವರವಾದ ಕಾರ್ಯಸೂಚಿಯನ್ನು ನೀಡಿದ್ದು, ಇದನ್ನು ಪರಿಶೀಲಿಸಿ ಒಂದು ವಾರದೊಳಗೆ ವರದಿ ನೀಡಲು ಕಾಂಗ್ರೆಸ್ ಅಧ್ಯಕ್ಷರು ಸಣ್ಣ ಸಮಿತಿಯನ್ನು ರಚಿಸಿದ್ದಾರೆ. ವರದಿ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದರು.

ADVERTISEMENT

ಕಾಂಗ್ರೆಸ್ ಪಕ್ಷವು 2024ರ ಚುನಾವಣೆಯಲ್ಲಿ 543 ಸ್ಥಾನಗಳ ಪೈಕಿ 400 ಸ್ಥಾನಗಳನ್ನು ಗುರಿಯಾಗಿಟ್ಟುಕೊಳ್ಳಬೇಕು ಮತ್ತು ಪಕ್ಷವು ದುರ್ಬಲವಾಗಿರುವ ಕಡೆಯಲ್ಲೆಲ್ಲಾ ಮೈತ್ರಿ ಮಾಡಿಕೊಳ್ಳಬೇಕು ಎಂದು ಸಭೆಯಲ್ಲಿ ಪ್ರಶಾಂತ್ ಕಿಶೋರ್ ಹೇಳಿರುವುದಾಗಿ ಮೂಲಗಳು ಉಲ್ಲೇಖಿಸಿವೆ.

ಕಿಶೋರ್ ಅವರು ಶೀಘ್ರದಲ್ಲೇ ಔಪಚಾರಿಕವಾಗಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದೂ ಮೂಲಗಳು ತಿಳಿಸಿವೆ.

ಚಿಂತನ ಶಿಬಿರ ಮತ್ತು ಮುಂಬರುವ ಚುನಾವಣೆಗಳಿಗೆ ಸಂಬಂಧಿಸಿದ ವಿಚಾರಗಳ ಕುರಿತು ಚರ್ಚಿಸಲು ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದಿದ್ದ ಸಭೆಯಲ್ಲಿ ಹಿರಿಯ ನಾಯಕರಾದ ಅಂಬಿಕಾ ಸೋನಿ, ದಿಗ್ವಿಜಯ್‌ ಸಿಂಗ್‌, ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಅಜಯ್‌ ಮಾಕೆನ್‌ ಸೇರಿದಂತೆ ಹಲವು ನಾಯಕರು ಹಾಜರಿದ್ದರು.

ಎರಡು ಗಂಟೆಗೂ ಹೆಚ್ಚು ಕಾಲ ಸಭೆ ನಡೆದಿದ್ದು, ಚುನಾವಣಾ ಕಾರ್ಯತಂತ್ರಗಾರ ಪ್ರಶಾಂತ್‌ ಕಿಶೋರ್‌ ತನ್ನ ಕಾರ್ಯಸೂಚಿಯನ್ನು ಪ್ರಸ್ತುತಪಡಿಸಿದ ನಂತರ ಹಿಂಬಾಗಿಲಿನಿಂದ ನಿರ್ಗಮಿಸಿದ್ದಾರೆ. ಕಿಶೋರ್ ಅವರು ಕಳೆದ ಕೆಲವು ವಾರಗಳಲ್ಲಿ ಹಲವು ಬಾರಿ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದಾರೆ.

ಚಿಂತನ ಶಿಬಿರಕ್ಕೂ ಮುನ್ನ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆ ಕರೆಯಲು ಕಾಂಗ್ರೆಸ್ ಸಜ್ಜಾಗಿದೆ. ಶಿಬಿರದ ಕಾರ್ಯಸೂಚಿಯನ್ನು ಅಂತಿಮಗೊಳಿಸಲು ಸಿಡಬ್ಲ್ಯೂಸಿ ಸಭೆ ಸೇರಲಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಎದ್ದಿರುವ ಭಿನ್ನಮತ ಶಮನಕ್ಕಾಗಿ ಕಾಂಗ್ರೆಸ್‌ ‘ಚಿಂತನ ಶಿಬಿರ’ ಆಯೋಜಿಸಲಿದೆ.

ಈ ಬಗ್ಗೆ ಕೆಲಸ ಮಾಡಲು ಹಿರಿಯ ಕಾಂಗ್ರೆಸ್ ನಾಯಕರು ನಿಯಮಿತವಾಗಿ ಸಭೆ ನಡೆಸುತ್ತಿದ್ದಾರೆ. ಅಂಬಿಕಾ ಸೋನಿ ಮತ್ತು ಮುಕುಲ್ ವಾಸ್ನಿಕ್ ಅವರಂತಹ ಹಿರಿಯ ನಾಯಕರಿಗೆ ಸೋನಿಯಾ ಗಾಂಧಿ ಅವರು ಈ ಕೆಲಸವನ್ನು ವಹಿಸಿದ್ದಾರೆ. ಇವರಿಬ್ಬರು ಸಿಡಬ್ಲ್ಯೂಸಿ ಮತ್ತು ಚಿಂತನಾ ಶಿಬಿರದ ಅಜೆಂಡಾವನ್ನು ಅಂತಿಮಗೊಳಿಸಲು ಇತರ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.