ADVERTISEMENT

ರಸ್ತೆ ನಿರ್ಮಿಸುವಂತೆ ಗರ್ಭಿಣಿ ಬೇಡಿಕೆ: ಹೆರಿಗೆ ದಿನಾಂಕ ತಿಳಿಸಿ ಎಂದ BJP ಸಂಸದ!

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 11:27 IST
Last Updated 12 ಜುಲೈ 2025, 11:27 IST
<div class="paragraphs"><p>ಲೀಲಾ ಸಾಹು</p></div>

ಲೀಲಾ ಸಾಹು

   

Credit: Facebook/leelasahu.mp

ಸಿಧಿ: ಮಧ್ಯಪ್ರದೇಶದ ಸಿಧಿ ಜಿಲ್ಲೆಯ ತಮ್ಮ ಊರಿಗೆ ವಾಹನ ಸಂಚಾರಕ್ಕೆ ಅನುಕೂಲಕರವಾದ ರಸ್ತೆ ನಿರ್ಮಿಸುವಂತೆ ಗರ್ಭಿಣಿ ಮಹಿಳೆಯೊಬ್ಬರು ಬೇಡಿಕೆ ಇಟ್ಟಿದ್ದರು. ಈ ಕುರಿತು ಬಿಜೆಪಿ ಸಂಸದ ರಾಜೇಶ್ ಮಿಶ್ರಾ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

ರಸ್ತೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ 25 ವರ್ಷದ ಲೀಲಾ ಸಾಹು, ‘ನಾನು ಮಗುವಿಗೆ ಜನ್ಮ ನೀಡಿದ ಬಳಿಕ ನವದೆಹಲಿಗೆ ತೆರಳಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗುತ್ತೇನೆ. ಆದಷ್ಟು ಬೇಗ ರಸ್ತೆ ನಿರ್ಮಿಸುವಂತೆ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.

‘ಒಂದು ವರ್ಷದ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ರಸ್ತೆ ವಿಚಾರವಾಗಿ ಅಭಿಯಾನ ಆರಂಭಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್‌ ಮಾಡಿ ಮನವಿ ಮಾಡಿದ್ದೆ. ಇದರ ಬೆನ್ನಲ್ಲೇ ಕಳೆದ ವರ್ಷ ಮಳೆಗಾಲದ ನಂತರ ರಸ್ತೆ ನಿರ್ಮಿಸಲಾಗುವುದು ಎಂದು ಸಿಧಿ ಸಂಸದ ರಾಜೇಶ್ ಮಿಶ್ರಾ ಭರವಸೆ ನೀಡಿದ್ದರು. ಆದರೆ, ಇದುವರೆಗೆ ರಸ್ತೆ ನಿರ್ಮಿಸಿಲ್ಲ’ ಎಂದು ಸಾಹು ಆರೋಪಿಸಿದ್ದಾರೆ.

ಸಾಹು ಅವರು ಕಳೆದೊಂದು ವರ್ಷದಿಂದ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಕಡ್ಡಿ-ಬಗೈಹಾ ಗ್ರಾಮಕ್ಕೆ ಸರಿಯಾದ ಸಂಪರ್ಕ ರಸ್ತೆ ಇಲ್ಲದಿರುವುದನ್ನು ಬಿಂಬಿಸುವ ರೀಲ್ಸ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಮತ್ತೆ ರಸ್ತೆ ವಿಚಾರವಾಗಿಯೇ ಅವರು ಸುದ್ದಿಯಲ್ಲಿದ್ದಾರೆ. ನಮ್ಮ ಊರಿನಲ್ಲಿ ನಾನು ಸೇರಿದಂತೆ ಇತರೆ ಐವರು ಗರ್ಭಿಣಿಯರಿದ್ದು, ಆಸ್ಪತ್ರೆಗೆ ಹೋಗುವುದಕ್ಕೆ ಕಷ್ಟವಾಗುತ್ತಿದೆ. ಹಾಗಾಗಿ ಕೂಡಲೇ ರಸ್ತೆ ನಿರ್ಮಿಸುವಂತೆ ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮಿಶ್ರಾ, ‘ಮಧ್ಯಪ್ರದೇಶದಲ್ಲಿ ಮೋಹನ್ ಯಾದವ್ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದೆ. ನಮ್ಮಲ್ಲಿ ಸಾಕಷ್ಟು ಆಂಬುಲೆನ್ಸ್‌ಗಳಿವೆ. ಯಾರು ಕೂಡಾ ಚಿಂತಿಸಬೇಕಿಲ್ಲ. ಲೀಲಾ ಅವರ ಹೆರಿಗೆಯ ನಿಗದಿತ ದಿನಾಂಕವನ್ನು ತಿಳಿಸಿದರೆ, ನಾವು ಆಕೆಯನ್ನು ಒಂದು ವಾರ ಮೊದಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ. ಜನರು ಯಾವುದಾದರೊಂದು ರೀತಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯತೆಯನ್ನು ಗಳಿಸಲು ಬಯಸುತ್ತಾರೆ. ರಸ್ತೆ ಸಮಸ್ಯೆಯನ್ನು ಈ ರೀತಿ ಮುನ್ನೆಲೆಗೆ ತರುವ ಅಗತ್ಯವೇನಿತ್ತು’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.