
ನವದೆಹಲಿ: ಅಣು ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸುವ ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅಂಕಿತ ಹಾಕಿದ್ದಾರೆ.
ಈ ಮಸೂದೆಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕಾರ ನೀಡಿದ್ದವು. ರಾಷ್ಟ್ರಪತಿಯವರು ಅಂಕಿತ ಹಾಕಿರುವ ಕುರಿತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
‘ಭಾರತದ ಪ್ರಗತಿಗಾಗಿ ಅಣುಶಕ್ತಿ ಸುಸ್ಥಿರ ಉತ್ಪಾದನೆ’ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ)ಹೆಸರಿನ ಮಸೂದೆಯು, ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವದ ಜೊತೆಗೆ ವಿದೇಶಿ ಹೂಡಿಕೆಗೂ ಅವಕಾಶ ಕಲ್ಪಿಸಲಿದೆ.
1962ರ ‘ಅಣುಶಕ್ತಿ ಕಾಯ್ದೆ’ ಹಾಗೂ ಪರಮಾಣು ಹಾನಿಗೆ ಸಂಬಂಧಿಸಿದ 2010ರ ನಾಗರಿಕ ಹೊಣೆಗಾರಿಕೆ ಕಾಯ್ದೆಯನ್ನು ಬದಲಾವಣೆ ಮಾಡಿ ಈ ಮಸೂದೆ ಮಂಡಿಸಲಾಗಿದೆ. ಈ ಎರಡೂ ಕಾಯ್ದೆಗಳು ಪರಮಾಣು ನೀತಿಗೆ ಸಂಬಂಧಿಸಿದಂತೆ ಕಠಿಣ ನಿಬಂಧನೆಗಳನ್ನು ಹೊಂದಿದ್ದವು.
ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಅಣು ವಿದ್ಯುತ್ ಉತ್ಪಾದನೆಯ ಪಾಲು ಶೇ 3ರಷ್ಟಿದೆ. 2047ರ ವೇಳೆಗೆ 100 ಗಿಗಾವಾಟ್‌ನಷ್ಟು ಅಣು ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಗುರಿ ಸಾಧನೆಗೆ ಅಗತ್ಯವಾಗಿರುವ ಉದಾರ ಆಡಳಿತ ನೀತಿಗೆ ಹೊಸ ಮಸೂದೆಯು ಅವಕಾಶ ಕಲ್ಪಿಸಲಿದೆ ಎಂದು ಹೇಳಲಾಗಿದೆ.
ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ‘2047ರ ವೇಳೆಗೆ 100 ಗಿಗಾವಾಟ್ ಅಣು ವಿದ್ಯುತ್ ಉತ್ಪಾದನೆ ಗುರಿ ಸಾಧಿಸಲು ಈ ಮಸೂದೆ ನೆರವಾಗಲಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.