ADVERTISEMENT

ಮತ್ತೆ ‘ಜಂಗಲ್‌ ರಾಜ್‌’ ಆಡಳಿತ ಬರದಂತೆ ತಡೆಯಲು ಕಮಲದ ಬಟನ್‌ ಒತ್ತಿ: ಅಮಿತ್ ಶಾ

ಪಿಟಿಐ
Published 4 ನವೆಂಬರ್ 2025, 10:18 IST
Last Updated 4 ನವೆಂಬರ್ 2025, 10:18 IST
   

‌ದರ್ಭಾಂಗ/ಮೋತಿಹಾರಿ(ಬಿಹಾರ): ಬಿಹಾರದಲ್ಲಿ ಜಂಗಲ್‌ ರಾಜ್‌ ಆಡಳಿತ ಮತ್ತೆ ಬರದಂತೆ ತಡೆಯಲು ಇವಿಎಂನಲ್ಲಿ ಕಮಲದ ಚಿಹ್ನೆಯಿರುವ ಬಟನ್‌ ಅನ್ನು ಒತ್ತಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗ್ರಹಿಸಿದ್ದಾರೆ.

ಇಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಶಾ, ಆರ್‌ಜೆಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘15 ವರ್ಷಗಳ ಲಾಲೂ–ರಾಬ್ರಿ ‘ಜಂಗಲ್‌ ರಾಜ್‌’ ಆಳ್ವಿಕೆಯಲ್ಲಿ ಬಿಹಾರವನ್ನು ಸಂಪೂರ್ಣವಾಗಿ ನಾಶಗೊಳಿಸಲಾಯಿತು. ಜಂಗಲ್‌ ರಾಜ್‌ ಮತ್ತೆ ಬರದಂತೆ ತಡೆಯಲು ಕಮಲದ ಚಿಹ್ನೆಗೆ ಮತ ಹಾಕಬೇಕಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ನವೆಂಬರ್ 6ರ ಮತದಾನ ದಿನದಂದು ನೀವು ಕಮಲದ ಚಿಹ್ನೆಗೆ ಮತ ಹಾಕದೆ ತಪ್ಪು ಮಾಡಿದರೆ, ಮತ್ತೆ ಬಿಹಾರದಲ್ಲಿ ಕೊಲೆ, ಲೂಟಿ, ಅಪಹರಣ, ಸುಲಿಗೆ ಸಾಮಾನ್ಯ ಸಂಗತಿಗಳಾಗುತ್ತವೆ’ ಎಂದು ಎಚ್ಚರಿಸಿದ್ದಾರೆ.

ಮುಂದುವರಿದು, ‘'ಜೀವಿಕಾ ದೀದಿ’ ಯೋಜನೆಯಡಿ ನೀಡಲಾಗುತ್ತಿದ್ದ ₹10 ಸಾವಿರ ಹಿಂಪಡೆಯುವಂತೆ ಕೋರಿ ಚುನಾವಣಾ ಆಯೋಗಕ್ಕೆ ಆರ್‌ಜೆಡಿ ದೂರು ನೀಡಿದೆ. ಸ್ವಸಹಾಯ ಗುಂಪುಗಳಿಗೆ ವರ್ಗಾಯಿಸಲಾದ ಹಣವನ್ನು ಲಾಲೂ ಅವರ ಮೂರು ತಲೆಮಾರುಗಳು ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದು ಆರೋಪಿಸಿದ್ದಾರೆ.

‘ಪ್ರಧಾನಿ ಮೋದಿ ಮತ್ತು ಅವರ ತಾಯಿಯನ್ನು ಅವಮಾನಿಸಿದ ಆರ್‌ಜೆಡಿ–ಕಾಂಗ್ರೆಸ್ ಪಕ್ಷಗಳಿಗೆ ಮುಂದಿನ ಚುನಾವಣೆಯಲ್ಲಿ ನಿರ್ಗಮನದ ದ್ವಾರವನ್ನು ತೋರಿಸುವ ಮೂಲಕ ಬಿಹಾರದ ಜನರು ಸೇಡು ತೀರಿಸಿಕೊಳ್ಳಲಿದ್ದಾರೆ’ ಎಂದಿದ್ದಾರೆ.

ಇನ್ನು, ‘ಎನ್‌ಡಿಎ ಅಧಿಕಾರಕ್ಕೆ ಬಂದರೆ ಸುಮಾರು ₹26 ಕೋಟಿ ವೆಚ್ಚದಲ್ಲಿ ಮಿಥಿಲಾಂಚಲ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುತ್ತದೆ. ಇದಕ್ಕೆ ಕೋಶಿ ನದಿ ನೀರನ್ನು ಬಳಸಿಕೊಳ್ಳಲಾಗುವುದು. ಈ ಭಾಗದಲ್ಲಿ ಪ್ರವಾಹವಾಗುವುದನ್ನು ತಡೆಗಟ್ಟಲಾಗುವುದು. ಕೋಶಿ ಅಲ್ಲದೇ ಗಂಗಾ, ಗಂಡಕ್‌ ನದಿಗಳ ನೀರನ್ನು ಸೂಕ್ತವಾಗಿ ಬಳಸಿಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

‘ರಾಜ್ಯದಲ್ಲಿ ಎನ್‌ಡಿಎ ಅಧಿಕಾರವನ್ನು ಉಳಿಸಿಕೊಂಡರೆ, ಚಿಕಿತ್ಸೆಗಾಗಿ ಮಿಥಿಲಾ, ಕೋಶಿ ಮತ್ತು ತಿರ್ಹತ್‌ನ ಜನರು ಪಟ್ನಾ ಅಥವಾ ದೆಹಲಿಗೆ ಹೋಗುವ ಅಗತ್ಯವಿಲ್ಲ. ಅವರಿಗೆ ಏಮ್ಸ್-ದರ್ಭಂಗಾದಲ್ಲಿ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳು ಒದಗಿಸಲಾಗುತ್ತದೆ’ ಎಂದು ಭರವಸೆ ನೀಡಿದ್ದಾರೆ.

ಅಲ್ಲದೇ, ಪ್ರತಿ ಜಿಲ್ಲೆಗೆ ಒಂದು ಎಂಜಿನಿಯರಿಂಗ್ ಮತ್ತು ಒಂದು ಮೆಡಿಕಲ್ ಕಾಲೇಜು ಸ್ಥಾಪಿಸುವುದಾಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.