ನವದೆಹಲಿ: ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರಕ್ಕೆ ಭೇಟಿ ನೀಡದಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಶುಕ್ರವಾರ ಟೀಕಾಪ್ರಹಾರ ನಡೆಸಿದವು.
ವಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದ ಗೃಹ ಸಚಿವ ಅಮಿತ್ ಶಾ, ‘ವಿರೋಧ ಪಕ್ಷಗಳು ಮಣಿಪುರದಲ್ಲಿನ ಪರಿಸ್ಥಿತಿಯನ್ನು ರಾಜಕೀಯಗೊಳಿಸುತ್ತಿವೆ’ ಎಂದರು.
‘ಈ ಹಿಂದೆ, ಮಣಿಪುರದಲ್ಲಿ ಇದೇ ರೀತಿಯ ಹಿಂಸಾಚಾರದ ಘಟನೆಗಳು ಸಂಭವಿಸಿದ್ದವು. ಆಗ, ಕಾಂಗ್ರೆಸ್‌ನ ಯಾವ ಪ್ರಧಾನಿಯೂ ಹಿಂಸಾಗ್ರಸ್ತ ರಾಜ್ಯಕ್ಕೆ ಭೇಟಿ ನೀಡಿರಲಿಲ್ಲ’ ಎಂದು ಶಾ ತಿವಿದರು.
ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿರುವುದನ್ನು ಅನುಮೋದಿಸುವುದರ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಪಕ್ಷಗಳ ಇತರ ಸಂಸದರು, ಮಣಿಪುರದಲ್ಲಿ ಶೀಘ್ರವೇ ಶಾಂತಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
‘ರಾಜ್ಯದಲ್ಲಿ ಸಂಭವಿಸಿದ ಹಿಂಸಾಚಾರಗಳ ಕುರಿತು ಶ್ವೇತಪತ್ರ ಹೊರಡಿಸುವುದು ಹಾಗೂ ಅಲ್ಲಿನ ವಿಧಾನಸಭೆಗೆ ಚುನಾವಣೆ ನಡೆಸುವುದು ಮಣಿಪುರ ಸಮಸ್ಯೆಗೆ ಪರಿಹಾರ ಆಗುವುದಿಲ್ಲ’ ಎಂದೂ ವಿರೋಧ ಪಕ್ಷಗಳ ಸದಸ್ಯರು ಹೇಳಿದರು.
ಈ ವಿಷಯ ಕುರಿತ ಚರ್ಚೆ ಶುಕ್ರವಾರ ತಡರಾತ್ರಿ 2.35ಕ್ಕೆ ಆರಂಭಗೊಂಡು, ನಸುಕಿನ 4.02ಕ್ಕೆ ಅಂತ್ಯಗೊಂಡಿತು.
‘ಮಣಿಪುರಕ್ಕೆ ಭೇಟಿ, ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಮಾತನಾಡಿಸಿ. ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಿ, ಕಾನೂನು–ಸುವ್ಯವಸ್ಥೆ ಮರುಸ್ಥಾಪಿಸಿ’ ಎಂದು ಮೋದಿ ಅವರನ್ನು ಖರ್ಗೆ ಒತ್ತಾಯಿಸಿದರು.
3.80 ಲಕ್ಷ ಕಿ.ಮೀ.ನಷ್ಟು ಪ್ರವಾಸ ಕೈಗೊಂಡಿರುವ ಮೋದಿ‘ ‘ಕಳೆದ 22 ತಿಂಗಳಲ್ಲಿ (ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ) ಪ್ರಧಾನಿ ಮೋದಿ ಅವರು ಎಷ್ಟು ಬಾರಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸ ಕೈಗೊಂಡಿದ್ದರು ಎಂಬ ಮಾಹಿತಿ ನಮ್ಮ ಬಳಿ ಇದೆ. ಅವರು 3.80 ಲಕ್ಷ ಕಿ.ಮೀ.ನಷ್ಟು ಪ್ರವಾಸ ಕೈಗೊಂಡಿದ್ದಾರೆ. ಇದರಲ್ಲಿ ಸಾವಿರ ಕಿ.ಮೀ. ಹೆಚ್ಚು ಅಥವಾ ಕಡಿಮೆ ಇರಬಹುದು’ ಎಂದು ಟಿಎಂಸಿಯ ಸದನ ನಾಯಕ ಡೆರೆಕ್ ಓಬ್ರಯಾನ್ ಛೇಡಿಸಿದರು. ‘ಭೂಮಿಯಿಂದ ಚಂದ್ರನಿಗಿರುವ ದೂರ 3.80 ಲಕ್ಷ ಕಿ.ಮೀ. ಇಷ್ಟು ಉದ್ದದಷ್ಟು ದೂರ ಪಯಣಿಸಿರುವ ವ್ಯಕ್ತಿ 2400 ಕಿ.ಮೀ ದೂರದ ಮಣಿಪುರ ಎಂಬ ರಾಜ್ಯಕ್ಕೆ ವಿಮಾನದಲ್ಲಿ ಪ್ರಯಾಣಿಸಲಾರ’ ಎಂದೂ ಲೇವಡಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.