ADVERTISEMENT

ಅಸ್ಸಾಂ ಚುನಾವಣೆ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ 2 ದಿನಗಳ ರಾಜ್ಯ ಪ್ರವಾಸ

ಪಿಟಿಐ
Published 1 ಮಾರ್ಚ್ 2021, 9:42 IST
Last Updated 1 ಮಾರ್ಚ್ 2021, 9:42 IST
ಕಾಮಾಕ್ಯ ದೇಗುಲದಲ್ಲಿ ಪ್ರಿಯಾಂಕಾ ಗಾಂಧಿ (ಪಿಟಿಐ ಚಿತ್ರ)
ಕಾಮಾಕ್ಯ ದೇಗುಲದಲ್ಲಿ ಪ್ರಿಯಾಂಕಾ ಗಾಂಧಿ (ಪಿಟಿಐ ಚಿತ್ರ)   

ಗುವಾಹಟಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಸದ್ಯದಲ್ಲೇ ಚುನಾವಣೆ ನಡೆಯಲಿರುವ ಅಸ್ಸಾಂಗೆ ಭೇಟಿ ನೀಡಿದ್ದಾರೆ. ಗುವಾಹಟಿಯ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡುವ ಮೂಲಕ ಎರಡು ದಿನಗಳ ರಾಜ್ಯ ಪ್ರವಾಸ ಆರಂಭಿಸಿದ್ದಾರೆ.

ಪಕ್ಷದ ಅಸ್ಸಾಂ ಉಸ್ತುವಾರಿ ಜಿತೇಂದ್ರ ಸಿಂಗ್, ರಾಜ್ಯ ಘಟಕದ ಅಧ್ಯಕ್ಷ ರಿಪುನ್ ಬೋರಾ ಹಾಗೂ ಇತರ ನಾಯಕರು ಗುವಾಹಟಿ ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾ ಅವರನ್ನು ಬರಮಾಡಿಕೊಂಡರು.

ಬಳಿಕ ನೀಲಾಚಲ್ ಬೆಟ್ಟದಲ್ಲಿರುವ ಶಕ್ತಿಪೀಠಕ್ಕೆ ತೆರಳುವ ಮಾರ್ಗದಲ್ಲಿ ಜಾಲುಕ್‌ಬಾರಿ ಎಂಬಲ್ಲಿ ಪ್ರಿಯಾಂಕಾ ಅವರು ಕಾಂಗ್ರೆಸ್ ಬೆಂಬಲಿಗರಿಂದ ಸನ್ಮಾನ ಸ್ವೀಕರಿಸಿದರು.

ADVERTISEMENT

ತಾವು ನಂಬಿಕೊಂಡಿರುವ ಕಾರ್ಯ ಈಡೇರಿರುವುದರಿಂದ ದೇಗುಲಕ್ಕೆ ಭೇಟಿ ನೀಡಬೇಕೆಂದು ತುಂಬಾ ಸಮಯದಿಂದ ಅಂದುಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.

ದೇಗುಲ ಭೇಟಿ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ನನಗಾಗಿ, ನನ್ನ ಕುಟುಂಬದವರಿಗಾಗಿ ಮತ್ತು ಇಡೀ ಅಸ್ಸಾಂನ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದ್ದೇನೆ’ ಎಂದು ತಿಳಿಸಿದ್ದಾರೆ.

ಮುಂಬರುವ ಚುನಾವಣೆ ಕುರಿತು ಕೇಳಲಾದ ಪ್ರಶ್ನೆಗೆ ಅವರು, ‘ದೇವರ ಆಶೀರ್ವಾದ ಪಡೆಯಲು ಮತ್ತು ನಾನು ನಂಬಿಕೊಂಡ ಕಾರ್ಯ ನೆರವೇರಿರುವ ಬಗ್ಗೆ ದೇವರಿಗೆ ಕೃತಜ್ಞತೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ. ರಾಜಕೀಯದ ಬಗ್ಗೆ ನಂತರ ಮಾತನಾಡಲಿದ್ದೇನೆ’ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಪ್ರಿಯಾಂಕಾ, ಅಸ್ಸಾಂನ ಕಾಮಾಕ್ಯ ದೇವಿ ದೇಗುಲಕ್ಕೆ ಭೇಟಿ ನೀಡುವುದಾಗಿಯೂ ಅಸ್ಸಾಂನ ಸಹೋದರ–ಸಹೋದರಿಯರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಜತೆ ಪ್ರಮುಖ ವಿಷಯಗಳ ಬಗ್ಗೆ ಮಾತುಕತೆ ನಡೆಸುವುದಾಗಿಯೂ ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.