ಪ್ರಿಯಾಂಕಾ ಗಾಂಧಿ ವಾದ್ರಾ
ಪಿಟಿಐ
ನವದೆಹಲಿ: ‘ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೆಹರೂ ಮತ್ತು ಇಂದಿರಾ ಗಾಂಧಿ ಏನು ಮಾಡಿದರು ಎಂಬುದರ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ನನ್ನ ತಾಯಿಯ ಕಣ್ಣೀರಿನ ಬಗ್ಗೆಯೂ ಮಾತನಾಡಿದರು. ಆದರೆ, ಕದನ ವಿರಾಮ ಘೋಷಿಸಿದ್ದೇಕೆ? ಎಂಬುವುದರ ಬಗ್ಗೆ ಅವರ ಬಳಿ ಉತ್ತರವಿಲ್ಲ’ ಎಂದು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.
ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ ಕುರಿತು ನಡೆಯುತ್ತಿರುವ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಬಾಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಹತರಾದ ಭಯೋತ್ಪಾದಕರಿಗಾಗಿ ನನ್ನ ತಾಯಿ ಕಣ್ಣೀರು ಸುರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಅದಕ್ಕೆ ನಾನು ಇಲ್ಲಿ ಉತ್ತರಿಸಲು ಬಯಸುತ್ತೇನೆ. ಭಯೋತ್ಪಾದಕರು ನನ್ನ ತಂದೆಯನ್ನು ಹತ್ಯೆ ಮಾಡಿದಾಗ ನನ್ನ ತಾಯಿ ಕಣ್ಣೀರು ಸುರಿಸಿದ್ದಾರೆ’ ಎಂದರು.
‘ಇದೇ ಕಾರಣಕ್ಕೆ ಇಂದು 26 ಜನರ(ಪಹಲ್ಗಾಮ್ ದಾಳಿಯಲ್ಲಿ ಹತ್ಯೆಯಾದ ಪ್ರವಾಸಿಗರು) ಬಗ್ಗೆ ಮಾತನಾಡುವಾಗ ಆ ನೋವನ್ನು ಅರ್ಥ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದರು.
‘ನಿನ್ನೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಒಂದು ಗಂಟೆ ಭಾಷಣ ಮಾಡಿದರು. ಆ ಸಮಯದಲ್ಲಿ ಭಯೋತ್ಪಾದನೆ, ದೇಶ ಪ್ರೇಮದ ಬಗ್ಗೆ ಹೇಳಿದ್ದಾರೆ. ಇತಿಹಾಸದ ಪಾಠವನ್ನು ಮಾಡಿದ್ದಾರೆ. ಆದರೆ, ಈ ದಾಳಿ(ಪಹಲ್ಗಾಮ್) ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಅವರು ವಿವರಿಸಿಲ್ಲ’ ಎಂದರು.
ಮುಂದುವರಿದು, ‘ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಒಬ್ಬ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರಲಿಲ್ಲ ಏಕೆ? ನಾಗರಿಕರ ಸುರಕ್ಷತೆ ಮತ್ತು ಭದ್ರತೆ ಪ್ರಧಾನಿ, ಗೃಹ ಸಚಿವ ಮತ್ತು ರಕ್ಷಣಾ ಸಚಿವರ ಜವಾಬ್ದಾರಿಯಲ್ಲವೇ?’ ಎಂದು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.