
ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಹಿಮಂತ ಬಿಸ್ವಾ ಶರ್ಮಾ
ಗುವಾಹಟಿ: ಪಾಕಿಸ್ತಾನ ನಂಟಿನ ಆರೋಪದ ಮೇಲೆ ಗೌರವ್ ಗೊಗೊಯ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಸೋನಾಪುರದಲ್ಲಿರುವ ಜುಬೀನ್ ಗರ್ಗ್ ಅವರ ಸಮಾಧಿಗೆ ಪ್ರಿಯಾಂಕಾ ಗಾಂಧಿ ಪುಷ್ಪನಮನ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಗರ್ಗ್ ಅವರು ರಾಜಕೀಯವನ್ನು ಮೀರಿದ ಮತ್ತು ಜೀವನದುದ್ದಕ್ಕೂ ಪ್ರೀತಿಯ ಸಂದೇಶವನ್ನು ಸಾರಿದ ಕಲಾವಿದರಾಗಿದ್ದಾರೆ’ ಎಂದು ಸ್ಮರಿಸಿದ್ದಾರೆ.
ಇದೇ ವೇಳೆ ಪಾಕಿಸ್ತಾನದೊಂದಿಗೆ ನಂಟಿನ ಆರೋಪ ಸಂಬಂಧ ಗೌರವ್ ಗೊಗೊಯ್ ಅವರ ಪತ್ನಿ, ಮಕ್ಕಳನ್ನು ಎಳೆದು ತರುವ ಮೂಲಕ ಹಿಮಂತ ಬಿಸ್ವಾ ಶರ್ಮಾ ಅವರು ‘ಕೊಳಕು ರಾಜಕೀಯ’ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
‘ರಾಜಕೀಯ ಕ್ಷೇತ್ರದಲ್ಲಿ ಎರಡು ರೀತಿಯ ನಾಯಕರಿರುತ್ತಾರೆ. ಒಬ್ಬರು ಸಕಾರಾತ್ಮಕ ರಾಜಕೀಯ ಮಾಡುವವರು ಮತ್ತು ಇನ್ನೊಬ್ಬರು ಧ್ರುವೀಕರಣ ಮಾಡುವವರು. ಪಾಕ್ ನಂಟಿನ ಆರೋಪದ ಮೇಲೆ ಹಿಮಂತ್ ಬಿಸ್ವ ಶರ್ಮಾ ಅವರು ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದರೂ ಗೌರವ್ ಗೊಗೊಯ್ ಪ್ರೀತಿಯಿಂದ ರಾಜಕೀಯ ಮಾಡುತ್ತಿದ್ದಾರೆ’ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
‘ಗೊಗೊಯ್ ಅವರು ಸಕಾರಾತ್ಮಕ ವ್ಯಕ್ತಿಯಾಗಿದ್ದು, ರಾಜಕೀಯದಲ್ಲಿ ಸಕಾರಾತ್ಮಕತೆಯನ್ನು ತರಲು ಬಯಸುತ್ತಿದ್ದಾರೆ. ಅದಕ್ಕಾಗಿಯೇ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿಗರು ವಾಗ್ದಾಳಿ ನಡೆಸುತ್ತಿದ್ದಾರೆ. ಅಸ್ಸಾಂನ ಜನರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ಆದರೆ, ರಾಜಕೀಯ ತೆವಲು ತೀರಿಸಿಕೊಳ್ಳಲು ಬಿಜೆಪಿ ನಾಯಕರು ಗೊಗೊಯ್ ಅವರ ಪತ್ನಿ, ಮಕ್ಕಳನ್ನು ಎಳೆದು ತಂದು ‘ಕೊಳಕು ರಾಜಕೀಯ’ ಮಾಡುತ್ತಿದ್ದಾರೆ’ ಎಂದು ಗುಡುಗಿದ್ದಾರೆ.
ಈ ರೀತಿಯ ರಾಜಕೀಯ ಮಾಡುವ ಬದಲು ಉದ್ಯೋಗ ಹುಡುಕುತ್ತಿರುವ ರಾಜ್ಯದ ಯುವಕರು ಮತ್ತು ಮಹಿಳೆಯರ ಬಗ್ಗೆ ಸಿಎಂ ಶರ್ಮಾ ಮಾತನಾಡಬೇಕು ಎಂದು ಪ್ರಿಯಾಂಕಾ ಒತ್ತಾಯಿಸಿದ್ದಾರೆ.
‘ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ಅವರ ಪತ್ನಿ ಎಲಿಜಬೆತ್ ಕೊಲ್ಬರ್ನ್ ಮತ್ತು ಪಾಕಿಸ್ತಾನದ ಪ್ರಜೆ ಅಲಿ ತೌಖೀರ್ ಶೇಖ್‌ರೊಂದಿಗೆ ನಿಕಟ ಸಂಪರ್ಕ ಇದೆ ಮತ್ತು ಗುಪ್ತಚರ ಇಲಾಖೆಯಿಂದ ಮಾಹಿತಿಯನ್ನು ರಹಸ್ಯವಾಗಿ ನೆರೆಯ ರಾಷ್ಟ್ರಕ್ಕೆ ರವಾನಿಸಿದ್ದಾರೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಆರೋಪಿಸಿದ್ದರು.
‘ಎಲಿಜಬೆತ್, ಪಾಕಿಸ್ತಾನದಲ್ಲಿನ ಅಲಿ ತೌಖ್ವೀರ್ ಶೇಖ್ ಅವರ ಸಂಘಟನೆ ಲೀಡ್ ಪಾಕಿಸ್ತಾನದೊಂದಿಗೆ ಕೆಲಸ ಮಾಡುತ್ತಿದ್ದರು. ನಂತರ ಅವರನ್ನು ಭಾರತಕ್ಕೆ ವರ್ಗಾಯಿಸಲಾಯಿತು. ಮುಂದೆ ಅವರು ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಅವರಿಗೆ ವೇತನವನ್ನು ಅಲಿ ತೌಖೀರ್ ಶೇಖ್ ಪಾವತಿಸುತ್ತಿದ್ದರು. ಎಲಿಜಬೆತ್‌ಗೆ ವೇತನ ನೀಡಲು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ (ಎಫ್‌ಸಿಆರ್‌ಎ) ನಿಯಮಗಳನ್ನು ಉಲ್ಲಂಘಿಸಲಾಗಿದೆ’ ಎಂದೂ ಶರ್ಮಾ ದೂರಿದ್ದರು.
‘2013ರಲ್ಲಿ ಗೌರವ್ ಗೊಗೊಯ್ ಅವರು ಗೋಪ್ಯವಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ಒಂದು ರೀತಿಯ ತರಬೇತಿ ಪಡೆದಿದ್ದಾರೆ. ಗೌರವ್, ಎಲಿಜಬೆತ್ ಕೊಲ್ಬರ್ನ್ ಮತ್ತು ಅಲಿ ತೌಖ್ವೀರ್ ಶೇಖ್ ನಡುವೆ ನಿಕಟ ಸಂಪರ್ಕವಿದೆ. ಎಲಿಜಬೆತ್ ಮತ್ತು ಶೇಖ್ ಅವರು ಅಂತರರಾಷ್ಟ್ರೀಯ ಸಂಚಿನ ಭಾಗವಾಗಿರಬಹುದು’ ಎಂದು ಶರ್ಮಾ ಗಂಭೀರವಾಗಿ ಆರೋಪ ಮಾಡಿದ್ದರು.
‘ಭಾರತ ಸರ್ಕಾರದ ಅನುಮತಿ ಇಲ್ಲದೇ, ಸ್ಥಳೀಯ ಸಂಸ್ಥೆಗಳೊಂದಿಗೆ(ಮುನ್ಸಿಪಲ್ ಏಜೆನ್ಸಿ)ಕೆಲಸ ಮಾಡಿದ್ದಾರೆ. ಇದನ್ನು ಅಸ್ಸಾಂ ಪೊಲೀಸರು ತನಿಖೆ ನಡೆಸಲು ಸಾಧ್ಯವಿಲ್ಲ. ಹಾಗಾಗಿ ರಾಷ್ಟ್ರೀಯ ಸಂಸ್ಥೆಗಳಿಂದ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದ್ದೇನೆ’ ಎಂದು ಶರ್ಮಾ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.