
ಬಿಹಾರದ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಹಸ್ತಲಾಘ ನೀಡಲು ಮುಗಿಬಿದ್ದ ಜನರು
ಪಿಟಿಐ ಚಿತ್ರ
ಕತಿಹಾರ್: ‘ಕಟ್ಟಾ (ದೇಸಿ ಬಂದೂಕು) ಪದ ಬಳಕೆಯು ಪ್ರಧಾನಿ ಹುದ್ದೆಯ ಘನತೆಗೆ ತಕ್ಕುದಲ್ಲ. ಮೋದಿ ಅವರು ಇಂಥ ಮಾತುಗಳಿಂದ ಪ್ರಧಾನಮಂತ್ರಿ ಸ್ಥಾನದ ಮಾನವನ್ನು ಕಳೆದಿದ್ದಾರೆ’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನಕ್ಕೂ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೀತಾಮರ್ಹಿ ಎಂಬಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ‘ಕಟ್ಟಾ ಸರ್ಕಾರ್’ ಎಂದು ಆರ್‌ಜೆಡಿ, ಕಾಂಗ್ರೆಸ್ ಒಳಗೊಂಡ ಮಹಾ ಘಟಬಂದನ್ ಅನ್ನು ಟೀಕಿಸಿದ್ದರು. ಇದಕ್ಕೆ ಪ್ರಿಯಾಂಕಾ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕತಿಹಾರ್‌ನಲ್ಲಿ ಮಾತನಾಡಿರುವ ಪ್ರಿಯಾಂಕಾ, ‘ಒಂದು ಕಾಲದಲ್ಲಿ ಬ್ರಿಟಿಷರ ವಿರುದ್ಧ ಮಹಾತ್ಮ ಗಾಂಧಿ ಅವರು ನಡೆಸಿದ ಹೋರಾಟವನ್ನೇ ಕಾಂಗ್ರೆಸ್ ಇಂದು ಅನುಸರಿಸುತ್ತಿದೆ. ಒಂದೆಡೆ ಅಹಿಂಸೆ, ಎಲ್ಲರನ್ನೂ ಒಳಗೊಳ್ಳುವ ‘ವಂದೇ ಮಾತರಂ’ ಘೋಷಣೆಯನ್ನು ಮೋದಿ ಅವರು ಮೊಳಗಿಸುತ್ತಾರೆ. ಮತ್ತೊಂದೆಡೆ ‘ಕಟ್ಟಾ’ ಪದವನ್ನು ಬಳಸುತ್ತಾರೆ’ ಎಂದಿದ್ದಾರೆ.
‘ಬಿಹಾರದಲ್ಲಿರುವ ಎನ್‌ಡಿಎ ಸರ್ಕಾರವು ಯುವಕರಿಗೆ ಉದ್ಯೋಗ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ಕಾರಿ ಸ್ವಾಮ್ಯ ಸಂಸ್ಥೆಗಳನ್ನು ತನ್ನ ಮಿತ್ರರಾದ ಎರಡು ಕಾರ್ಪೊರೇಟ್ ಕಂಪನಿಗಳಿಗೆ ನೀಡಿದೆ’ ಎಂದು ಆರೋಪಿಸಿದರು.
‘₹10 ಸಾವಿರ ಲಂಚ ನೀಡಿ ಮಹಿಳೆಯರ ಮತಗಳನ್ನು ಪಡೆಯಬಹುದು ಎಂದು ಬಿಜೆಪಿ ಆಲೋಚಿಸಿದೆ’ ಎಂದು ಪ್ರಿಯಾಂಕಾ ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.