ADVERTISEMENT

ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ ಕಾರ್ಯಕರ್ತೆಯರ ಭೇಟಿ ಮಾಡಿದ ಪ್ರಿಯಾಂಕಾ

ಪಂಚಾಯಿತಿ ಚುನಾವಣೆ ವೇಳೆ ಇಬ್ಬರು ಕಾರ್ಯಕರ್ತೆಯರ ಮೇಲೆ ಬಿಜೆಪಿಯಿಂದ ಹಲ್ಲೆ ಆರೋಪ

ಪಿಟಿಐ
Published 17 ಜುಲೈ 2021, 14:17 IST
Last Updated 17 ಜುಲೈ 2021, 14:17 IST
ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ   

ಲಖನೌ: ಮಂಡಲ ಪಂಚಾಯಿತಿ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆ ವೇಳೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆಗೆ ಒಳಗಾಗಿದ್ದರು ಎನ್ನಲಾದ ಸಮಾಜವಾದಿ ಪಕ್ಷದ ಇಬ್ಬರು ಮಹಿಳಾ ಸದಸ್ಯರನ್ನು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಭೇಟಿ ಮಾಡಿದರು.

ಲಖೀಂಪುರ ಖೇರಿಯ ಪಥ್‌ಗವಾ ಬ್ಲಾಕ್‌ನ ಸೆಮ್ರಾ ಗ್ರಾಮದಲ್ಲಿ ಸಂತ್ರಸ್ತ ಮಹಿಳೆಯರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವುದು, ಅದಕ್ಕಾಗಿ ನಾಮಪತ್ರ ಸಲ್ಲಿಸುವುದು ಅವರ ಸಂವಿಧಾನದತ್ತ ಹಕ್ಕು. ಆದರೆ, ಅವರ ಈ ಹಕ್ಕನ್ನು ಕಸಿಯಲಾಗಿದೆ’ ಎಂದು ದೂರಿದರು.

ಪಕ್ಷದ ಅಭ್ಯರ್ಥಿ ಋತು ಸಿಂಗ್‌ ಹಾಗೂ ಅವರಿಗೆ ಸೂಚಕಿಯಾಗಿದ್ದ ಅನಿತಾ ಯಾದವ್‌ ಅವರ ಸೀರೆಯನ್ನು ಎಳೆಯುವ ಮೂಲಕ ಬಿಜೆಪಿ ಕಾರ್ಯಕರ್ತರು ಅಸಭ್ಯವಾಗಿ ವರ್ತಿಸಿದ್ದರು ಎಂದು ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಆರೋಪಿಸಿದ್ದರು.

ADVERTISEMENT

‘ಈ ರೀತಿ ಮಹಿಳೆಯರ ವಿರುದ್ಧ ದೌರ್ಜನ್ಯ ಎಸಗಿದವರಿಗೆ ಆಶ್ರಯ ನೀಡುವವರಿಗೆ ಜನರು ತಕ್ಕ ಪಾಠ ಕಲಿಸುವರು. ಮಹಿಳೆ ‍ಪಂಚಾಯಿತಿಯ ಪ್ರಧಾನ ಆಗುತ್ತಾಳೆ, ಶಾಸಕಿ, ಸಂಸದೆ ಆಗುತ್ತಾಳೆ. ಪ್ರಧಾನಿಯೂ ಆಗಿ, ಈ ಸರ್ಕಾರವನ್ನು ಕಿತ್ತೊಗೆಯುತ್ತಾಳೆ ಎಂಬ ಮಾತನ್ನು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆ ತಂದಿರುವ ಬಿಜೆಪಿಯ ಗೂಂಡಾಗಳು ಗಮನವಿಟ್ಟು ಕೇಳಬೇಕು’ ಎಂದು ಅವರು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

‘ಪಂಚಾಯಿತಿ ಚುನಾವಣೆ ವೇಳೆ ನಡೆದ ಹಿಂಸಾಚಾರದಲ್ಲಿ ಸಂತ್ರಸ್ತರಾದ ಎಲ್ಲ ಸಹೋದರಿಯರಿಗೆ, ನಾಗರಿಕರಿಗೆ ನ್ಯಾಯ ಸಿಗಬೇಕು. ಈ ಸಂಬಂಧ ನಾನು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.