ADVERTISEMENT

ಕನಿಷ್ಠ ಆದಾಯ ಖಾತರಿ ಯೋಜನೆ ಕಾಂಗ್ರೆಸ್‌ನ ನಕಲಿ ಯೋಜನೆ: ಮಾಯಾವತಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 12:01 IST
Last Updated 29 ಜನವರಿ 2019, 12:01 IST
   

ಲಖನೌ: ಕಾಂಗ್ರೆಸ್‌ನ ಘೋಷಿತ‘ಬಡವರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ’ ಬಗ್ಗೆ ಪ್ರತಿಕ್ರಿಯಿಸಿರುವ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಇದು ಕೂಡ ಗರೀಬಿ ಹಠವೋಯೋಜನೆ ರೀತಿಯ ಒಂದು ನಕಲಿ ಯೋಜನೆ ಎಂದು ಟೀಕಿಸಿದ್ದಾರೆ.

ಛತ್ತೀಸ್‌ಗಡದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಸೋಮವಾರ ಮಾತನಾಡಿದ್ದ ಕಾಂಗ್ರೆಸ್‌ ಮುಖ್ಯಸ್ಥ ರಾಹುಲ್‌ ಗಾಂಧಿ, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆಬಡವರಿಗೆ ಕನಿಷ್ಠ ಆದಾಯ ಖಾತರಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಮಾಯಾವತಿ ರಾಹುಲ್‌ ಗಾಂಧಿ ಹೇಳಿಕೆಯನ್ನು ಖಂಡಿಸಿದ್ದು ಇದು ಕೂಡ ಕಾಂಗ್ರೆಸ್‌ ಪಕ್ಷದ ಬಡತನ ನಿರ್ಮೂಲನೆ ಯೋಜನೆಯಂತಹ ಒಂದುನಕಲಿ ಯೋಜನೆ ಎಂದು ಗೇಲಿ ಮಾಡಿದ್ದಾರೆ.

ADVERTISEMENT

ಒಂದೇ ನಾಣ್ಯದ ಎರಡು ಮುಖಗಳಂತಿರುವಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಜನರಿಗೆ ಭರವಸೆ ಕೊಟ್ಟು ವಂಚನೆ ಮಾಡುತ್ತಿವೆ. 2014ರಲ್ಲಿ ಮೋದಿ ಕೂಡ ಕಪ್ಪು ಹಣವನ್ನು ಮರಳಿ ತಂದು , ಜನರ ಖಾತೆಗೆ 15 ಲಕ್ಷ ರೂಪಾಯಿ ಜಮೆ ಮಾಡುವಭರವಸೆ ಕೊಟ್ಟಿದ್ದರು,ಆದರೆ ಜನರ ಖಾತೆಗೆ ₹15 ಲಕ್ಷ ಬಂತೇ? ಎಂದು ಮಾಯಾವತಿ ಪ್ರಶ್ನೆ ಮಾಡಿದ್ದಾರೆ.

ಈ ಹಿಂದೆ ಕಾಂಗ್ರೆಸ್‌ಅಧಿಕಾರದಲ್ಲಿದ್ದಾಗಬಡತನ ನಿರ್ಮೂಲನೆ ಮಾಡುವುದಾಗಿ ಹೇಳಿ ಜನರಿಗೆ ಭರವಸೆ ಕೊಟ್ಟಿತ್ತು, ಬಡತನ ನಿರ್ಮೂಲನೆ ಆಯಿತೇ? ಅದೇ ರೀತಿಕನಿಷ್ಠ ಆದಾಯ ಖಾತರಿ ಯೋಜನೆಯೂ ಕಾಂಗ್ರೆಸ್‌ನ ಒಂದು ನಕಲಿ ಯೋಜನೆ ಎಂದು ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.

ಕನಿಷ್ಠ ಆದಾಯ ಖಾತರಿ ಯೋಜನೆ ಅನ್ವಯ ಈ ದೇಶದ ಪ್ರತಿಯೊಬ್ಬ ಬಡ ವ್ಯಕ್ತಿಗೂ ಕನಿಷ್ಠ ಆದಾಯ ಮಾಡಿಕೊಡುವುದು ಈ ಯೋಜನೆಯ ಮುಖ್ಯ ಗುರಿಎಂದು ರಾಹುಲ್‌ ಗಾಂಧಿ ಪ್ರಕಟಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಮಾಯಾವತಿ ಸಮಾಜವಾದಿ ಪಕ್ಷದ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳು ತಲಾ 38 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.