ADVERTISEMENT

ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಬಡ್ತಿ: ಮೆರಿಟ್ ಪಟ್ಟಿಯಷ್ಟೇ ಅಂತಿಮವಲ್ಲ- SC

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 15:05 IST
Last Updated 16 ಜನವರಿ 2025, 15:05 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ‘ಸೀಮಿತ ಸ್ಪರ್ಧಾತ್ಮಕ ಪರೀಕ್ಷೆ’ ನಡೆಸಿ ಸಿದ್ಧಪಡಿಸಿದ ಅರ್ಹತಾ ಪಟ್ಟಿಯನ್ನಷ್ಟೇ ಆಧರಿಸಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಬಡ್ತಿಯನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್‌ ಚಂದ್ರ ಶರ್ಮಾ ಅವರ ಪೀಠವು ಧರ್ಮೇಂದ್ರ ಕುಮಾರ್‌ ಸಿಂಗ್‌ ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿತು.

‘ಜಾರ್ಖಂಡ್‌ ಹೈಕೋರ್ಟ್‌ ನಡೆಸಿದ್ದ ಅರ್ಹತಾ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿ, ಅರ್ಹತೆ ಪಡೆದಿದ್ದರೂ ನಮ್ಮನ್ನು ಕಾನೂನುಬದ್ಧ ಬಡ್ತಿ ಹಕ್ಕಿನಿಂದ ವಂಚಿತರನ್ನಾಗಿಸಲಾಗಿದೆ. ಮೆರಿಟ್‌ ಪಟ್ಟಿಯಲ್ಲಿ ಕಡಿಮೆ ಸ್ಥಾನದಲ್ಲಿದ್ದೇವೆ ಎಂಬ ಕಾರಣಕ್ಕೆ ನಮಗೆ ಬಡ್ತಿ ನೀಡಲಾಗಿಲ್ಲ’ ಎಂದು ಅರ್ಜಿದಾರರು ಮೇಲ್ಮನವಿಯಲ್ಲಿ ತಿಳಿಸಿದ್ದರು.

ADVERTISEMENT

ಇತರ ಅಧಿಕಾರಿಗಳನ್ನು ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ನೇಮಿಸಿದ ದಿನಾಂಕದಿಂದಲೇ (2019ರ ಮೇ 30ರ ಅಧಿಸೂಚನೆ) ಈ ಮೇಲ್ಮನವಿದಾರರೂ ಬಡ್ತಿ ಪಡೆಯಲು ಖಂಡಿತವಾಗಿಯೂ ಅರ್ಹರಿದ್ದಾರೆ ಎಂದು ಪೀಠ ತೀರ್ಪುನಲ್ಲಿ ಹೇಳಿದೆ. ಈ ಸಂಬಂಧ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಪೀಠ ವಜಾಗೊಳಿಸಿತು.

ಹಿರಿತನ, ಬಡ್ತಿ, ವೇತನ ನಿಗದಿ ಸೇರಿದಂತೆ ಇತರ ಎಲ್ಲ ಸೇವಾ ಪ್ರಯೋಜನಗಳಿಗೆ ಮೇಲ್ಮನವಿದಾರರು ಅರ್ಹರಾಗಿರುತ್ತಾರೆ. ಆದರೆ ಅವರು ಯಾವುದೇ ಹಿಂಬಾಕಿ ವೇತನಕ್ಕೆ ಅರ್ಹರಿರುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.