ADVERTISEMENT

ದೆಹಲಿ | ಸಹಾಯಧನಕ್ಕೆ ಆಗ್ರಹ: ಸಚಿವೆ ಅತಿಶಿ ಮನೆ ಎದುರು ಬೃಹತ್‌ ಪ್ರತಿಭಟನೆ

ಪಿಟಿಐ
Published 11 ಜೂನ್ 2024, 11:18 IST
Last Updated 11 ಜೂನ್ 2024, 11:18 IST
<div class="paragraphs"><p>ಸಚಿವೆ ಅತಿಶಿ</p></div>

ಸಚಿವೆ ಅತಿಶಿ

   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮಹಿಳೆಯರಿಗೆ ಪ್ರತಿ ತಿಂಗಳು ₹1,000 ಸಹಾಯಧನ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಭರವಸೆಯನ್ನು ಈಡೇರಿಸುವಂತೆ ಮಹಿಳಾ ಮೋರ್ಚಾ ಸದಸ್ಯರು ಎಎಪಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ದೆಹಲಿ ಹಣಕಾಸು ಸಚಿವೆ ಅತಿಶಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ.

ನಗರದ ಮಥುರಾ ರಸ್ತೆಯಲ್ಲಿರುವ ಅತಿಶಿ ಅವರ ಮನೆ ಎದುರು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದ್ದಾರೆ.

ADVERTISEMENT

ಮಹಿಳೆಯರಿಗೆ ಪ್ರತಿ ತಿಂಗಳು ₹1,000 ಸಹಾಯಧನ ನೀಡುವುದಾಗಿ ಎಎಪಿ ತನ್ನ ಬಜೆಟ್‌ನಲ್ಲಿ ಘೋಷಿಸಿತ್ತು. ಇದು ಕೇವಲ ಚುನಾವಣಾ ಭರವಸೆ ಆಗಬಾರದು. ಆದ್ದರಿಂದ, ಸರ್ಕಾರ ಮಹಿಳೆಯರಿಗೆ ಹಣ ನೀಡಬೇಕು ಎಂದು ಪ್ರತಿಭಟನಾಕಾರರಲ್ಲಿ ಒಬ್ಬರಾದ ಸಫಿಯಾ ಫಹೀಂ ಹೇಳಿದ್ದಾರೆ.

ಕೆಲವು ಮಹಿಳೆಯರು ಸಚಿವೆ ಅತಿಶಿ ಅವರ ಮನೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಅವರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿರುವ ಕಾರಣ ಯಾರನ್ನು ಬಂಧಿಸಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಜಾಮೀನು ಪಡೆದು ತಿಹಾರ್‌ ಜೈಲಿನಿಂದ ಹೊರಬಂದಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು, ಪ್ರಚಾರದ ವೇಳೆ ದೆಹಲಿಯ ಮಹಿಳೆಯರಿಗೆ ಪ್ರತಿ ತಿಂಗಳು ₹1,000 ನೀಡಲಾಗುವುದು ಎಂಬ ಭರವಸೆಯನ್ನು ಪುನರುಚ್ಚರಿಸಿದ್ದರು.

ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ದೆಹಲಿಯ ಮಹಿಳೆಯರಿಗೆ ಪ್ರತಿ ತಿಂಗಳು ₹1,000 ನೀಡುವುದಾಗಿ ಎಎಪಿ ಸರ್ಕಾರ 2024–25ರ ಬಜೆಟ್‌ನಲ್ಲಿ ಘೋಷಿಸಿತ್ತು.

ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಮುಗಿದ ಬಳಿಕ ಈ ಯೋಜನೆಯನ್ನು ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಈ ಹಿಂದೆ ಪಿಟಿಐಗೆ ನೀಡಿದ್ದ ಸಂದರ್ಶನವೊಂದರಲ್ಲಿ ಸಚಿವೆ ಅತಿಶಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.