ADVERTISEMENT

ಬಿಷಪ್‌ ಪ್ರಾಂಕೊ ವಿರೋಧಿಸಿದ್ದ ಕ್ರೈಸ್ತ ಸನ್ಯಾಸಿನಿಗೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 19:34 IST
Last Updated 15 ಮಾರ್ಚ್ 2019, 19:34 IST
ಬಿಷಪ್‌ಫ್ರಾಂಕೊ
ಬಿಷಪ್‌ಫ್ರಾಂಕೊ   

ತಿರುವನಂತಪುರ: ಅತ್ಯಾಚಾರದ ಆರೋಪಿ ಬಿಷಪ್‌ ಫ್ರಾಂಕೊ ಮುಳಕ್ಕಲ್‌ ವಿರುದ್ಧ ಪ್ರತಿಭಟನೆ ನಡೆಸಿದ್ದ ಕ್ರೈಸ್ತ ಸನ್ಯಾಸಿನಿಗೆ ಎಚ್ಚರಿಕೆ ನೀಡಲಾಗಿದ್ದು, ಕೆಲಸದಿಂದ ತೆಗೆದುಹಾಕಲಾಗುವುದು ಎಂದು ಕ್ಯಾಥೋಲಿಕ್‌ ಚರ್ಚ್‌ ತಿಳಿಸಿದೆ.

ವಯನಾಡು ಜಿಲ್ಲೆಯ ಮಾನಂತವಾಡಿಧರ್ಮಪ್ರಾಂತ್ಯದ ಸಿಸ್ಟರ್‌ ಲೂಸಿ ಕಲಪ್ಪುರ ಅವರಿಗೆ ಕೆಲಸದಿಂದ ತೆಗೆದುಹಾಕುವ ಸೂಚನೆ ನೀಡಿದೆ. ತಮ್ಮ ವಿರುದ್ಧದ ಆರೋಪಗಳಿಗೆ ಲೂಸಿ ಈಗಾಗಲೇ ವಿವರಣೆ ನೀಡಿದ್ದಾರೆ. ಆದರೆ ಅವುಗಳು ತೃಪ್ತಿದಾಯಕವಾಗಿಲ್ಲ ಎಂದು ಚರ್ಚ್‌ ತಿಳಿಸಿದೆ.

ಧರ್ಮಸಭೆಯಿಂದ ತೆಗೆದುಹಾಕಲಾಗುವುದು ಇಲ್ಲವೇ ಮತ್ತೊಮ್ಮೆ ನೋಟಿಸ್‌ ನೀಡದೆ ಅಮಾನತುಪಡಿಸಲಾಗುವುದು. ಯಾವುದಾದರೂ ಹೇಳಿಕೆ ನೀಡುವುದಿದ್ದರೆ ಮೇ 16ರವರೆಗೆ ಸಮಯವಿದೆ ಎಂದು ತಿಳಿಸಲಾಗಿದೆ.

ADVERTISEMENT

‘ನಾನು 17ನೇ ವಯಸ್ಸಿನಲ್ಲೇ ಸನ್ಯಾಸಿನಿಯಾಗಿದ್ದೇನೆ. ಚರ್ಚ್‌ ಯಾವುದೇ ಕ್ರಮ ಕೈಗೊಂಡರೂ ಅದನ್ನು ಎದುರಿಸುತ್ತೇನೆ. ನಾನು ಯಾವುದೇ ಅಕ್ರಮ ಮಾಡಿಲ್ಲ ಎಂದು ದೃಢವಾಗಿ ನಂಬಿದ್ದೇನೆ’ ಎಂದು ಲೂಸಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಲೂಸಿ ಅವರ ವಿರುದ್ಧ ಸುಳ್ಳು ಆರೋಪಗಳನ್ನೂ ಹೊರಿಸಲಾಗಿದೆ. ಅವರು ಕಾರು ಖರೀದಿಸಿದ್ದಾರೆ ಮತ್ತು ಚರ್ಚ್‌ ಅನುಮತಿ ಪಡೆಯದೇ ಪುಸ್ತಕ ಪ್ರಕಟಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮದರ್‌ ಅನ್ನಾ ಜೋಸೆಫ್‌ ಅವರು, ಲೂಸಿ ಅವರು ವಾಹಿನಿಗಳ ಚರ್ಚೆಯಲ್ಲಿ ಭಾಗವಹಿಸಿ ಚರ್ಚ್‌ ನಾಯಕತ್ವದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಜನವರಿ 1 ರಂದುಹೇಳಿದ್ದರು. ಚರ್ಚ್‌ ಅನುಮತಿ ಪಡೆಯದೇ ಫ್ರಾಂಕೊ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ದೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.