ADVERTISEMENT

ಸಚಿವ ಕೆ.ಟಿ. ಜಲೀಲ್‌ ವಿರುದ್ಧ ಕೇರಳದಲ್ಲಿ ಮುಂದುವರಿದ ಪ್ರತಿಭಟನೆ: ಇಬ್ಬರ ಬಂಧನ

ಪಿಟಿಐ
Published 14 ಸೆಪ್ಟೆಂಬರ್ 2020, 10:48 IST
Last Updated 14 ಸೆಪ್ಟೆಂಬರ್ 2020, 10:48 IST
ಕೆ.ಟಿ.ಜಲೀಲ್‌ 
ಕೆ.ಟಿ.ಜಲೀಲ್‌    

ಕೊಲ್ಲಂ (ಕೇರಳ): ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್‌ ರಾಜೀನಾಮೆಗೆ ಆಗ್ರಹಿಸಿ ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಸಚಿವರ ಬೆಂಗಾವಲು ಪಡೆಯ ವಾಹನಗಳನ್ನು ತಡೆಯಲು ಯತ್ನಿಸಿದ ಆರೋಪದಡಿ ಇಬ್ಬರು ಯುವಕರನ್ನು ಪೊಲೀಸರು ಭಾನುವಾರ ರಾತ್ರಿಬಂಧಿಸಿದ್ದಾರೆ.

ಯುವ ಮೋರ್ಚಾದ ಪ್ರವೀಣ್‌ (24) ಹಾಗೂ ವಿಪಿನ್‌ ರಾಜಾ (25) ಬಂಧಿತರು.

ಜಲೀಲ್‌ ಹಾಗೂ ಅವರ ಬೆಂಗಾವಲು ಪಡೆಯವರು ಪರಿಪಲ್ಲಿ ಮೂಲಕ ಹಾದುಹೋಗುವಾಗ ಕಾರಿನಲ್ಲಿ ಬಂದ ಪ್ರವೀಣ್‌ ಮತ್ತು ವಿಪಿನ್‌, ಸಚಿವರ ಬೆಂಗಾವಲು ಪಡೆಯ ವಾಹನವನ್ನು ತಡೆಯಲು ಮುಂದಾಗಿದ್ದರು.

ADVERTISEMENT

‘ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಐಪಿಸಿ ಸೆಕ್ಷನ್‌ 143, 147, 353ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕೃತ್ಯದಲ್ಲಿ ಇನ್ನಷ್ಟು ಜನ ಭಾಗಿಯಾಗಿರುವ ಸಾಧ್ಯತೆ ಇದ್ದು ಆ ಕುರಿತು ತನಿಖೆ ನಡೆಸುತ್ತಿದ್ದೇವೆ’ ಎಂದು ಪರಿಪಲ್ಲಿ ಪೊಲೀಸ್‌ ಠಾಣೆಯ ಅಧಿಕಾರಿ ಹೇಳಿದ್ದಾರೆ.

‘ಕಾರಿನಲ್ಲಿ ಬಂದ ಆರೋಪಿಗಳು ವೇಗವಾಗಿ ಸಾಗುತ್ತಿದ್ದ ಬೆಂಗಾವಲು ಪಡೆಯ ವಾಹನಗಳನ್ನು ತಡೆಯಲು ಮುಂದಾಗಿರುವುದು ಸರಿಯಲ್ಲ. ಇದರಿಂದ ಆಗಲಿದ್ದ ಅಪಾಯ ಎಂತಹದ್ದು ಎಂಬುದು ಅವರಿಗೆ ತಿಳಿದಂತಿಲ್ಲ. ಇದು ಪ್ರತಿಭಟನೆ ಮಾಡುವ ರೀತಿಯಲ್ಲ. ಇದು ಸಚಿವರ ಜೀವಕ್ಕೆ ಅಪಾಯ ತಂದೊಡ್ಡುವ ಕುತಂತ್ರದ ಭಾಗವಾಗಿರುವಂತಿದೆ. ಇದರಿಂದ ಸಚಿವರು ತಪ್ಪಿಸಿಕೊಂಡಿದ್ದಾರೆ’ ಎಂದು ಮೀನುಗಾರಿಕೆ ಖಾತೆ ಸಚಿವೆ ಮರ್ಸಿಕುಟ್ಟಿ ಅಮ್ಮಾ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.