ADVERTISEMENT

ಡೋಲೊದಿಂದ ಉಡುಗೊರೆ ಪಡೆದ ವೈದ್ಯರ ಮಾಹಿತಿ ಕೊಡಿ: ಐಟಿ ಇಲಾಖೆಗೆ ಎನ್‌ಎಂಸಿ ಪತ್ರ

ಪಿಟಿಐ
Published 6 ಆಗಸ್ಟ್ 2022, 1:32 IST
Last Updated 6 ಆಗಸ್ಟ್ 2022, 1:32 IST
ಡೋಲೊ ಮಾತ್ರೆ ತಯಾರಕ ಸಂಸ್ಥೆ ಮೈಕ್ರೋ ಲ್ಯಾಬ್ಸ್‌ ಲಿಮಿಟೆಡ್‌
ಡೋಲೊ ಮಾತ್ರೆ ತಯಾರಕ ಸಂಸ್ಥೆ ಮೈಕ್ರೋ ಲ್ಯಾಬ್ಸ್‌ ಲಿಮಿಟೆಡ್‌    

ನವದೆಹಲಿ: ಡೋಲೊ 650 ಮಾತ್ರೆ ತಯಾರಕ ಸಂಸ್ಥೆ ‘ಮೈಕ್ರೋ ಲ್ಯಾಬ್ಸ್’ ಸೇರಿದಂತೆ ಆರು ಔಷಧ ತಯಾರಕ ಕಂಪನಿಗಳಿಂದ ಉಡುಗೊರೆ ಪಡೆದ ವೈದ್ಯರ ವಿವರಗಳನ್ನು ನೀಡುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಆದಾಯ ತೆರಿಗೆ ಇಲಾಖೆಗೆ ಕೇಳಿದೆ.

ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ಸ್‌ ಲಿಮಿಟೆಡ್‌ಗೆ ಸೇರಿದ 9 ರಾಜ್ಯಗಳ 36 ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯು ಜುಲೈ 6 ರಂದು ದಾಳಿ ನಡೆಸಿತ್ತು.

‘ದೇಶದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಡೋಲೊ-650 ಮಾತ್ರೆಯ ತಯಾರಕ ಸಂಸ್ಥೆಯು ತನ್ನ ಉತ್ಪನ್ನ ಮಾರಾಟಕ್ಕೆ ವಾಮಮಾರ್ಗ ಬಳಸುತ್ತಿದೆ. ವೈದ್ಯರಿಗೆ ಸುಮಾರು ₹1,000 ಕೋಟಿ ಮೌಲ್ಯದ ಉಡುಗೊರೆ ನೀಡಿದೆ’ ಎಂದು ನೇರ ತೆರಿಗೆಯ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಜುಲೈನಲ್ಲಿ ಆರೋಪಿಸಿತ್ತು.

ಆಗಸ್ಟ್ 3 ರಂದು ಸಿಬಿಡಿಟಿ ಅಧ್ಯಕ್ಷ ನಿತಿನ್ ಗುಪ್ತಾ ಅವರಿಗೆ ಎನ್‌ಎಂಸಿ ಪತ್ರ ಬರೆದಿದೆ. ‘ಔಷಧ ತಯಾರಕ ಸಂಸ್ಥೆಗಳಿಂದ ಉಡುಗೊರೆ ಪಡೆದಿರುವ ವೈದ್ಯರ ನೋಂದಣಿ ಸಂಖ್ಯೆ ಮತ್ತು ವಿಳಾಸದ ಸಹಿತ ಹೆಸರುಗಳನ್ನು ಒದಗಿಸಿದರೆ, ಆ ವಿವರಗಳನ್ನು ಅಗತ್ಯ ಕ್ರಮಕ್ಕಾಗಿ ಸಂಬಂಧಿಸಿದ ರಾಜ್ಯಗಳ ವೈದ್ಯಕೀಯ ಮಂಡಳಿಗಳಿಗೆ ರವಾನಿಸಲಾಗುವುದು’ ಎಂದು ಪತ್ರದಲ್ಲಿ ಹೇಳಿದೆ.

ಕಾಲಕಾಲಕ್ಕೆ ತಿದ್ದುಪಡಿಯಾಗುವ ಭಾರತೀಯ ವೈದ್ಯಕೀಯ ಮಂಡಳಿಯ (ವೃತ್ತಿಪರ ನಡವಳಿಕೆ. ಶಿಷ್ಟಾಚಾರ ಮತ್ತು ನೈತಿಕತೆ) ನಿಯಮಗಳು– 2002ರ ಸೆಕ್ಷನ್‌ 6.8 ಬಗ್ಗೆ ಎನ್‌ಎಂಸಿಯ ಸದಸ್ಯ ಡಾ. ಯೋಗೇಂದ್ರ ಮಲಿಕ್‌ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಔಷಧೀಯ ಮತ್ತು ಸಂಬಂಧಿತ ಆರೋಗ್ಯ ವಲಯದ ಉದ್ಯಮದೊಂದಿಗಿನ ವೈದ್ಯರ ಸಂಬಂಧಗಳ ಬಗ್ಗೆ ಸೆಕ್ಷನ್‌ 6.8 ವಿವರಿಸುತ್ತದೆ.

ನೋಂದಾಯಿತ ವೈದ್ಯರಿಂದ ಆಗುವ ವೃತ್ತಿಪರ ದುಷ್ಕೃತ್ಯದ ಬಗ್ಗೆ ಯಾವುದೇ ದೂರನ್ನು ಸಂಬಂಧಿಸಿದ ರಾಜ್ಯ ವೈದ್ಯಕೀಯ ಮಂಡಳಿಯು ವ್ಯವಹರಿಸುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ನೈತಿಕತೆ– ವೈದ್ಯಕೀಯ ನೋಂದಣಿ ಮಂಡಳಿ(ಇಎಂಆರ್‌ಬಿ), ರಾಷ್ಟ್ರೀಯ ವೈದ್ಯಕೀಯ ಮಂಡಳಿಯು ನೋಂದಾಯಿತ ವೈದ್ಯರ ನಡವಳಿಕೆಯಲ್ಲಿ ನೈತಿಕತೆಯನ್ನು ರೂಢಿಸಲು ಬದ್ಧವಾಗಿದೆ ಮತ್ತು ಯಾವುದೇ ದುರ್ನಡತೆಯನ್ನು ಸಹಿಸುವುದಿಲ್ಲ’ ಎಂದು ಎಂದು ಡಾ ಮಲಿಕ್ ಹೇಳಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.