ADVERTISEMENT

ಪುದುಚೇರಿ: ಶಾಲಾ ಸಮವಸ್ತ್ರ ಧರಿಸಿ ಸದನಕ್ಕೆ ಬಂದ ಡಿಎಂಕೆ ಸದಸ್ಯರು

ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿಕೆ

ಪಿಟಿಐ
Published 3 ಫೆಬ್ರುವರಿ 2023, 14:24 IST
Last Updated 3 ಫೆಬ್ರುವರಿ 2023, 14:24 IST
ಪುದುಚೇರಿಯಲ್ಲಿ ಶಾಲಾ ಸಮವಸ್ತ್ರ ಹಾಗೂ ಬ್ಯಾಗ್‌ ಧರಿಸಿ ಸೈಕಲ್‌ನಲ್ಲಿ ಕಲಾಪಕ್ಕೆ ಬಂದ ಡಿಎಂಕೆ ಪಕ್ಷದ ಶಾಸಕರು –ಪಿಟಿಐ ಚಿತ್ರ
ಪುದುಚೇರಿಯಲ್ಲಿ ಶಾಲಾ ಸಮವಸ್ತ್ರ ಹಾಗೂ ಬ್ಯಾಗ್‌ ಧರಿಸಿ ಸೈಕಲ್‌ನಲ್ಲಿ ಕಲಾಪಕ್ಕೆ ಬಂದ ಡಿಎಂಕೆ ಪಕ್ಷದ ಶಾಸಕರು –ಪಿಟಿಐ ಚಿತ್ರ   

ಪುದುಚೇರಿ: ಪುದುಚೇರಿಯ ವಿಧಾನಸಭೆ ಅಧಿವೇಶನಕ್ಕೆ ಆರ್.ಶಿವ ನೇತೃತ್ವದ, ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ (ಡಿಎಂಕೆ) ಆರು ಮಂದಿ ಶಾಸಕರು ಶುಕ್ರವಾರ ಶಾಲಾ ಸಮವಸ್ತ್ರ ಹಾಗೂ ಬ್ಯಾಗ್‌ ಧರಿಸಿ ಬಂದಿದ್ದರು.

ಶಾಲಾ ವಿದ್ಯಾರ್ಥಿಗಳಿಗೆ ಇನ್ನೂ ಸಮವಸ್ತ್ರ ವಿತರಿಸದ ಸರ್ಕಾರದ ಕ್ರಮವನ್ನು ಖಂಡಿಸಿದ ಅವರು ಈ ರೀತಿ ಪ್ರತಿಭಟಿಸಿದರು.

ಅಲ್ಲದೆ, ಪುದುಚೇರಿಗೆ ರಾಜ್ಯ ಸ್ಥಾನಮಾನ ನೀಡುವ ಕುರಿತು ನಿರ್ಣಯವನ್ನು ತರುವಂತೆಯೂ ಸರ್ಕಾರವನ್ನು ಒತ್ತಾಯಿಸಿದರು. ‘ನಮಗೆ ರಾಜ್ಯದ ಸ್ಥಾನಮಾನ ಬೇಕು. ಈ ವಿಷಯದಲ್ಲಿ ಪುದುಚೇರಿಯನ್ನು ಕೆರಳಿಸಬಾರದು’ ಎಂದು ಒಟ್ಟಿಗೇ ಕೂಗಿದರು.

ADVERTISEMENT

ಸ್ಪೀಕರ್‌ ಸೆಲ್ವಂ ಅವರು ಸದಸ್ಯರಿಗೆ ಶಾಂತಿಯಿಂದ ವರ್ತಿಸುವಂತೆ ಮನವಿ ಮಾಡಿಕೊಂಡರೂ ಅವರು ಕೇಳಲಿಲ್ಲ.

ನಂತರ ಎಲ್ಲ ಡಿಎಂಕೆ ಶಾಸಕರೂ ಸಭಾತ್ಯಾಗ ಮಾಡಿದರೂ ಸ್ವಲ್ಪ ಸಮಯದ ಬಳಿಕ ಸದನಕ್ಕೆ ಹಿಂದಿರುಗಿದರು. ಇದಕ್ಕೂ ಮುನ್ನ ಇಬ್ಬರು ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದ್ದರು.

ಈ ಗಲಾಟೆಯ ಮಧ್ಯದಲ್ಲೇ ಮುಖ್ಯಮಂತ್ರಿ ಎನ್. ರಂಗಸಾಮಿ ಮತ್ತು ಅವರ ಸಂಪುಟ ಸಚಿವರು 2022-2023ರ ಸಾಲಿನಲ್ಲಿ ತಮ್ಮ ಇಲಾಖೆಗಳಿಗೆ ಬೇಕಾದ ಹೆಚ್ಚುವರಿ ಅನುದಾನಕ್ಕಾಗಿ ಇಟ್ಟ ಬೇಡಿಕೆಗಳನ್ನು ಸದನವು ಅಂಗೀಕರಿಸಿತು. ಮುಖ್ಯಮಂತ್ರಿ ಮಂಡಿಸಿದ ಧನವಿನಿಯೋಗ ವಿಧೇಯಕವನ್ನೂ ಸದನ ಅಂಗೀಕರಿಸಿತು. ಕೇವಲ 24 ನಿಮಿಷಗಳ ಅವಧಿಗೆ ಅಧಿವೇಶನ ನಡೆಸಿದ ಸ್ಪೀಕರ್‌ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.