ADVERTISEMENT

ಅಪಹರಣ: ₹300 ಕೋಟಿ ಮೌಲ್ಯದ ಬಿಟ್‌ಕಾಯಿನ್‌ಗೆ ಬೇಡಿಕೆ ಇಟ್ಟ ಪೊಲೀಸ್ ಕಾನ್‌ಸ್ಟೆಬಲ್

ಏಜೆನ್ಸೀಸ್
Published 2 ಫೆಬ್ರುವರಿ 2022, 17:04 IST
Last Updated 2 ಫೆಬ್ರುವರಿ 2022, 17:04 IST
ಬಿಟ್‌ಕಾಯಿನ್‌–ಪ್ರಾತಿನಿಧಿಕ ಚಿತ್ರ
ಬಿಟ್‌ಕಾಯಿನ್‌–ಪ್ರಾತಿನಿಧಿಕ ಚಿತ್ರ   

ಮುಂಬೈ: ಕ್ರಿಪ್ಟೊಕರೆನ್ಸಿ ವಹಿವಾಟು ನಡೆಸುವ ವ್ಯಕ್ತಿಯೊಬ್ಬನನ್ನು ಅಪಹರಿಸಿ, ₹300 ಕೋಟಿ ಮೌಲ್ಯದ ಬಿಟ್‌ಕಾಯಿನ್‌ಗೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಪುಣೆಯ ಪೊಲೀಸ್‌ ಕಾನ್‌ಸ್ಟೆಬಲ್‌ ಮತ್ತು ಏಳು ಮಂದಿ ಸಹಚರರನ್ನು ಬಂಧಿಸಲಾಗಿದೆ.

ಪುಣೆಯ 38 ವರ್ಷ ವಯಸ್ಸಿನ ವಿನಯ್‌ ನಾಯಕ್‌ ಭಾರೀ ಮೊತ್ತದ ಬಿಟ್‌ಕಾಯಿನ್‌ ಕರೆನ್ಸಿ ವಹಿವಾಟು ನಡೆಸುತ್ತಿರುವುದನ್ನು ತಿಳಿದು ಕೊಂಡಿದ್ದ ಕಾನ್‌ಸ್ಟೆಬಲ್‌ ದಿಲೀಪ್‌ ತುಕಾರಾಂ ಖಂಡಾರೆ, ಅವರ ಅಪಹರಣ ಮಾಡಲು ಯೋಜನೆ ರೂಪಿಸಿದ್ದರು. ದಿಲೀಪ್‌ ಮತ್ತು ಸಹಚರರು ಸೇರಿ ಜನವರಿ 14ರಂದು ವಿನಯ್‌ ಅವರ ಅಪಹರಣ ನಡೆಸಿ, ಅವರಲ್ಲಿರುವ ₹300 ಕೋಟಿ ಮೌಲ್ಯದ ಡಿಜಿಟಲ್‌ ಕರೆನ್ಸಿಗಳನ್ನು ವರ್ಗಾಯಿಸುವುದು ಹಾಗೂ ₹8 ಲಕ್ಷ ನಗದು ಕೊಡುವಂತೆ ಬೇಡಿಕೆ ಇಟ್ಟಿದ್ದರು.

ಅಪಹರಣ ಪ್ರಕರಣದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿರುವುದನ್ನು ತಿಳಿದುಕೊಂಡ ಆರೋಪಿಗಳು ವಿನಯ್‌ ಅವರನ್ನು ಮಾರನೆಯ ದಿನವೇ ಬಿಟ್ಟು ಕಳುಹಿಸಿದ್ದರು. ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ.

ADVERTISEMENT

'ಅಪಹರಣದ ಯೋಜನೆ ರೂಪಿಸಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ಸೇರಿ ಎಂಟು ಜನರನ್ನು ಬಂಧಿಸಿದ್ದೇವೆ' ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಖಚಿತ ಪಡಿಸಿರುವುದಾಗಿ ಎಎಫ್‌ಪಿ ವರದಿ ಮಾಡಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕ್ರಿಪ್ಟೊಕರೆನ್ಸಿಯ ಲಾಭ ಗಳಿಕೆಯ ಮೇಲೆ ಶೇಕಡ 30ರಷ್ಟು ತೆರಿಗೆ ವಿಧಿಸುವುದಾಗಿ 2022–23ರ ಕೇಂದ್ರ ಬಜೆಟ್‌ನಲ್ಲಿ ಮಂಡಿಸಿದರು. ಆರ್‌ಬಿಐ ಇದೇ ವರ್ಷ ಏಪ್ರಿಲ್‌ನಲ್ಲಿ ಡಿಜಿಟಲ್‌ ಕರೆನ್ಸಿ ಹೊರತರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.