ADVERTISEMENT

ವಂಚನೆ ಪ್ರಕರಣ: ನ.5ರ ವರೆಗೂ ಪೊಲೀಸ್ ವಶಕ್ಕೆ ಡ್ರಗ್ಸ್‌ ಪ್ರಕರಣದ ಸಾಕ್ಷಿ ಗೋಸಾವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2021, 12:57 IST
Last Updated 28 ಅಕ್ಟೋಬರ್ 2021, 12:57 IST
   

ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿದ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಕಿರಣ್ ಗೋಸಾವಿ ಅವರನ್ನು ಪುಣೆಯ ನ್ಯಾಯಾಲಯವು ನವೆಂಬರ್‌ 5ರ ವರೆಗೂ ಪೊಲೀಸ್‌ ವಶಕ್ಕೆ ನೀಡಿದೆ. 2018ರ ವಂಚನೆ ಪ್ರಕರಣವೊಂದರ ಸಂಬಂಧ ಅವರನ್ನು ಬಂಧಿಸಲಾಗಿದೆ.

ವಂಚನೆ ಪ್ರಕರಣದಲ್ಲಿ ಪುಣೆ ನಗರ ಪೊಲೀಸರು ಕಿರಣ್‌ ಗೋಸಾವಿ ಅವರನ್ನು ಬಂಧಿಸಿ ಸಿಟಿ ಕೋರ್ಟ್‌ಗೆ ಹಾಜರು ಪಡಿಸಿದ್ದರು. ನ್ಯಾಯಾಲಯವು ಅವರನ್ನು 8 ದಿನಗಳ ವರೆಗೂ ಪೊಲೀಸ್‌ ಕಸ್ಟಡಿಗೆ ನೀಡಿದೆ.

ಹಲವು ದಾಖಲೆಗಳನ್ನು ನಕಲು ಮಾಡಿದ ಹಾಗೂ ಹಲವು ಕಡೆ ಅವುಗಳನ್ನು ಬಳಸಿರುವ ಆರೋಪಗಳ ಮೇಲೆ ಫರಾಸ್‌ಖಾನಾ ಪೊಲೀಸ್‌ ಠಾಣೆಯಲ್ಲಿ ಗೋಸಾವಿ ವಿರುದ್ಧ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಪುಣೆ ನಗರ ಪೊಲೀಸರು ಐಪಿಸಿ ಸೆಕ್ಷನ್‌ 465 ಮತ್ತು ಸೆಕ್ಷನ್‌ 468 ಸೇರಿಸಿದ್ದಾರೆ. ಅಕ್ಟೋಬರ್ 14 ರಂದು ಪೊಲೀಸರು ಅವರ ವಿರುದ್ಧ ಲುಕೌಟ್ ನೋಟಿಸ್‌ ಹೊರಡಿಸಿದ್ದರು.

ADVERTISEMENT

ನಟ ಶಾರುಕ್‌ ಖಾನ್‌ ಮಗ ಆರ್ಯನ್‌ ಖಾನ್‌ ಆರೋಪಿತನಾಗಿರುವ ಡ್ರಗ್ಸ್‌ ಪ್ರಕರಣದಲ್ಲಿ ಗೋಸಾವಿ ಸಾಕ್ಷಿಯಾಗಿದ್ದಾರೆ. ಎನ್‌ಸಿಬಿ ದಾಳಿ ನಡೆಸಿದ ಸ್ಥಳದಲ್ಲಿ ಮತ್ತು ಎನ್‌ಸಿಬಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದ ಗೋಸಾವಿ, ಆರ್ಯನ್ ಖಾನ್ ಅವರೊಂದಿಗೆ ಸೆಲ್ಫಿ ಫೋಟೊ ಮತ್ತು ವಿಡಿಯೊ ತೆಗೆದಿದ್ದರು. ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. 'ಖಾಸಗಿ ತನಿಖಾಧಿಕಾರಿ' ಎಂದು ಹೇಳಿಕೊಂಡಿರುವ ಗೋಸಾವಿ ಅವರನ್ನು ಎನ್‌ಸಿಬಿ ಡ್ರಗ್ಸ್‌ ಪ್ರಕರಣದಲ್ಲಿ 'ಸ್ವತಂತ್ರ ಸಾಕ್ಷಿ' ಎಂದು ಘೋಷಿಸಿದೆ.

ಇಂದು ಬಾಂಬೆ ಹೈ ಕೋರ್ಟ್‌ ಆರ್ಯನ್‌ ಖಾನ್‌ ಸೇರಿ ಮೂವರಿಗೆ ಜಾಮೀನು ಮಂಜೂರು ಮಾಡಿದೆ. ನಾಳೆ, ಇಲ್ಲವೇ ಶನಿವಾರ ಅವರು ಜೈಲಿನಿಂದ ಹೊರಬರುವ ಸಾಧ್ಯತೆ ಇದೆ. ಡ್ರಗ್ಸ್‌ ಪ್ರಕರಣದಲ್ಲಿ ಈವರೆಗೂ ಎನ್‌ಸಿಬಿ 20 ಜನರನ್ನು ಬಂಧಿಸಿದೆ.

ಶಾರುಕ್‌ ಅವರ ಮ್ಯಾನೇಜರ್‌ ಪೂಜಾ ದದಲಾನಿ ಅವರನ್ನು ಕೆ.ಪಿ.ಗೋಸಾವಿ ಭೇಟಿಯಾಗಿರುವುದನ್ನು ಎನ್‌ಸಿಬಿ ಈ ಹಿಂದೆ ಸ್ಪಷ್ಟಪಡಿಸಿದೆ. ಆರ್ಯನ್‌ ಖಾನ್‌ ಬಿಡುಗಡೆಗೆ ₹25 ಕೋಟಿ ಬೇಡಿಕೆ ಇಡಲಾಗಿತ್ತು ಎಂದು ಮುಂಬೈ ನಿವಾಸಿ, ಪ್ರಕರಣದ ಸಾಕ್ಷಿಧಾರರಾಗಿರುವ ಪ್ರಭಾಕರ್‌ ಸೈಲ್‌ ಆರೋಪಿಸಿದ್ದರು.

ಗೋಸಾವಿ ಮತ್ತು ಸ್ಯಾಮ್‌ ಡಿಸೋಜಾ ಸೇರಿ ಬಿಡುಗಡೆಯ ಡೀಲ್‌ ಮಾತುಕತೆ ನಡೆಸಿದ್ದರು. ಅಂತಿಮವಾಗಿ ₹18 ಕೋಟಿಗೆ ಒಪ್ಪಂದವಾಗಿತ್ತು ಹಾಗೂ ಅದರಲ್ಲಿ ₹8 ಕೋಟಿ ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್‌ ವಾಂಖೆಡೆಗೆ ಸೇರುವ ಸಾಧ್ಯತೆ ಇತ್ತು ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.